

ಚೆನ್ನೈ: ಮೃತಪಟ್ಟಿದ್ದಾನೆ ಎಂದು ತಿಳಿದು ರಾತ್ರಿಯಿಡೀ ಫ್ರೀಜರ್ ಪೆಟ್ಟಿಗೆಯಲ್ಲಿ ಇಡಲಾಗಿದ್ದ 74 ವರ್ಷದ ವೃದ್ಧ ಬೆಳಗಾದಾಗ ಅಲುಗಾಡಿ ಅಚ್ಚರಿ ಮೂಡಿಸಿರುವ ಘಟನೆ ತಮಿಳುನಾಡಿನಲ್ಲಿ ನಡೆದಿದೆ.
ತಮಿಳುನಾಡಿನ ಸೇಲಂ ಜಿಲ್ಲೆಯ ಕಂಧಂಪತ್ತಿಯ ನಿವಾಸಿ 74 ವರ್ಷದ ವೃದ್ಧ ಬಾಲಸುಬ್ರಹ್ಮಣ್ಯ ಕುಮಾರ್ ಅವರು ಮೃತಪಟ್ಟಿರುವುದಾಗಿ ನಂಬಿ ರಾತ್ರಿಪೂರ್ತಿ ಫ್ರೀಜರ್ ಬಾಕ್ಸಿನಲ್ಲಿ ಇಡಲಾಗಿತ್ತು. ಆದರೆ ಬೆಳಗ್ಗೆ ಆ ಪೆಟ್ಟಿಗೆಯೊಳಗೆ ಅವರು ಉಸಿರಾಡುತ್ತಿರುವುದು ಕಂಡುಬಂದಿದೆ.
ಸದ್ಯ ಅವರನ್ನು ಪೊಲೀಸರು ರಕ್ಷಿಸಿದ್ದು, ಆಸ್ಪತ್ರೆಗೆ ದಾಖಲಿಸಿದ್ದಾರೆ. ಅವರನ್ನು ಫ್ರೀಜರ್ನಲ್ಲಿ ಇಟ್ಟಿರುವ ಹಿಂದಿನ ಸತ್ಯಾಂಶದ ಕುರಿತು ತನಿಖೆ ನಡೆಸುತ್ತಿದ್ದಾರೆ.
ಆಗಿದ್ದೇನು? ಬಾಲಸುಬ್ರಹ್ಮಣ್ಯ ಕುಮಾರ್ ಅವರು ತಮ್ಮ ತಂಗಿಯ ಮಗಳು ಗೀತಾ ಹಾಗೂ ತಮ್ಮ ತಮ್ಮ, ಸರವಣನ್ ಜತೆಗೆ ವಾಸಿಸುತ್ತಿದ್ದರು. ಎರಡು ತಿಂಗಳಿನಿಂದ ಅವರಿಗೆ ಅನಾರೋಗ್ಯ ಬಾಧಿಸಿತ್ತು. ಹಾಸಿಗೆಯಲ್ಲಿಯೇ ಇದ್ದರು. ಆದರೆ ಇದೇ 12ರಂದು ಅವರನ್ನು ಏಳಿಸಲು ಪ್ರಯತ್ನಿಸಿದ್ದಾಗ ಎಚ್ಚರಗೊಂಡಿಲ್ಲ. ಹೀಗಾಗಿ ಅವರು ಮೃತಪಟ್ಟಿದ್ದಾರೆ ಎಂದು ತಾವು ಭಾವಿಸುದಾಗಿ ಸರವಣನ್ ಹೇಳಿದ್ದಾರೆ.
ದೇಹದಲ್ಲಿ ಯಾವುದೇ ಚಲನೆ ಕಂಡುಬಂದಿರಲಿಲ್ಲ. ಈ ಕಾರಣದಿಂದ ಸಂಬಂಧಿಕರೆಲ್ಲರೂ ಬರುವವರೆಗೆ ಅವರ "ಮೃತದೇಹ"ವನ್ನು ಫ್ರೀಜರ್ನಲ್ಲಿ ಇರಿಸಲು ಬಯಸಿದೆವು. ಈ ಹಿನ್ನೆಲೆಯಲ್ಲಿ ಫ್ರೀಜರ್ ಬಾಕ್ಸ್ ಕಂಪೆನಿಯವರನ್ನು ಕರೆದು ಅದರಲ್ಲಿ ಬಾಲಸುಬ್ರಹ್ಮಣ್ಯ ಅವರನ್ನು ಇಡಲಾಗಿತ್ತು. ಅವರು ಸತ್ತೇ ಹೋಗಿದ್ದಾರೆ ಎಂದು ಭಾವಿಸಿ ಎಲ್ಲರಿಗೂ ಕರೆ ಮಾಡಲಾಗಿತ್ತು.
ಸಂಬಂಧಿಕರೆಲ್ಲರೂ ಮಾರನೆಯ ದಿನ ಮನೆಗೆ ಬಂದಿದ್ದರು. ಅಂತಿಮ ಸಂಸ್ಕಾರಕ್ಕೆ ಏರ್ಪಾಡು ಕೂಡ ಮಾಡಲಾಗಿತ್ತು. ಇದೇ ವೇಳೆ ಫ್ರೀಜರ್ ಬಾಕ್ಸ್ ವಾಪಸ್ ಪಡೆಯಲು ಕಂಪೆನಿಯ ಸಿಬ್ಬಂದಿ ಬಂದಿದ್ದಾರೆ. ಆಗ ಅವರಿಗೆ ಬಾಕ್ಸಿನೊಳಗೆ ವೃದ್ಧ ಉಸಿರಾಡುತ್ತಿರುವುದನ್ನು ಕಂಡಿದೆ. ಕೂಡಲೇ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ವಿಚಾರ ತಿಳಿದು ತಕ್ಷಣ ಸ್ಥಳಕ್ಕೆ ಬಂದ ಪೊಲೀಸರು, ಫ್ರೀಜರ್ ಬಾಕ್ಸಿನಿಂದ ವೃದ್ಧನನ್ನು ಹೊರ ತೆಗೆದು ಹತ್ತಿರ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.
ಆದರೆ ಇದು ಅನೇಕ ಸಂದೇಹಗಳಿಗೆ ಎಡೆ ಮಾಡಿಕೊಟ್ಟಿದೆ ಎಂದಿದ್ದಾರೆ ಪೊಲೀಸರು. 'ಸೋಮವಾರ ಪೆಟ್ಟಿಗೆ ತಂದುಕೊಟ್ಟಿದ್ದ ಕಂಪೆನಿ ಸಿಬ್ಬಂದಿ, ಮರುದಿನ ಸಂಜೆ 7-8 ಗಂಟೆ ಸುಮಾರಿಗೆ ಪೆಟ್ಟಿಗೆಯನ್ನು ವಾಪಸ್ ಕೊಂಡೊಯ್ಯಲು ತೆರಳಿದ್ದರು. ಆಗ ಆ ವ್ಯಕ್ತಿ ಇನ್ನೂ ಬದುಕಿರುವುದು ಕಂಡುಬಂದಿದೆ. ಅಲ್ಲಿ ವಾಸ್ತವವಾಗಿ ನಡೆದಿದ್ದೇನೆ ಎಂದು ತಿಳಿಯಲು ಪ್ರಯತ್ನಿಸುತ್ತಿದ್ದೇವೆ. ಮನೆಯಲ್ಲಿ ಆ ಫ್ರೀಜರ್ ಪೆಟ್ಟಿಗೆ ಇದ್ದಷ್ಟೂ ಸಮಯ ವ್ಯಕ್ತಿಯನ್ನು ಅದರೊಳಗೆ ಇರಿಸಿರಲು ಸಾಧ್ಯವೇ ಇಲ್ಲ' ಎಂದು ಅವರು ಹೇಳಿದ್ದಾರೆ.
ಸದ್ಯ ಕುಟುಂಬಸ್ಥರ ವಿರುದ್ಧ ಐಪಿಸಿ ಸೆಕ್ಷನ್ 287 (ಮಾನವ ಜೀವಕ್ಕೆ ಅಪಾಯವನ್ನುಂಟುಮಾಡುವ ನಿರ್ಲಕ್ಷ್ಯದ ವರ್ತನೆ) ಮತ್ತು ಐಪಿಸಿ ಸೆಕ್ಷನ್ 336 (ಜೀವಕ್ಕೆ ಅಥವಾ ಇತರರ ವೈಯಕ್ತಿಕ ಸುರಕ್ಷತೆಗೆ ಅಪಾಯವನ್ನುಂಟುಮಾಡುವಂತೆ) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.