

ಜೈಪುರ: ರಾಜಸ್ಥಾನದಲ್ಲಿ ಬಿಜೆಪಿ ಭರ್ಜರಿ ಗೆಲುವು ಸಾಧಿಸಿದ್ದ ಹಿನ್ನೆಲೆಯಲ್ಲಿ, ನಡೆಯುತ್ತಿದ್ದ ವಿಜಯೋತ್ಸವದಲ್ಲಿ ಕಾಂಗ್ರೆಸ್ ಕಾರ್ಯಕರ್ತರಿಂದ ನಡೆದಿದೆ ಎನ್ನಲಾದ ಗಲಾಟೆ ವಿಕೋಪಕ್ಕೆ ಹೋಗಿ ಇಬ್ಬರು ಮೃತಪಟ್ಟಿರುವ ಘಟನೆ ನಡೆದಿದೆ.
ವಿಜಯೋತ್ಸವದ ಸಮಯದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಪಕ್ಷಗಳ ಕಾರ್ಯಕರ್ತರಿಂದ ನಡೆದ ಮಾರಾಮಾರಿಯಲ್ಲಿ ತಂದೆ-ಮಗ ಬಲಿಯಾಗಿರುವುದಾಗಿ ವರದಿಯಾಗಿದೆ. ಈ ಗಲಾಟೆಯಲ್ಲಿ ಕನಿಷ್ಠ ಹತ್ತು ಜನರು ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಫತೇಪುರ ಪಟ್ಟಣದ ಬಲೋಡ್ ಬಡಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಪಂಚಾಯತ್ ಸಮಿತಿ ಫತೇಪುರ್ ವಾರ್ಡ್ ನಂ 19ರಲ್ಲಿ ಬಿಜೆಪಿ ಅಭ್ಯರ್ಥಿ ರುಬಿನಾ ಖಾನ್ ಜಯ ಗಳಿಸಿದ್ದಾರೆ. ಈ ಸಂದರ್ಭದಲ್ಲಿ ಅವರು, ಮೆರವಣಿಗೆ ನಡೆಯುತ್ತಿತ್ತು. ಅದೇ ಸಂದರ್ಭದಲ್ಲಿ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಯುವಕನನ್ನು ಯಾರೋ ಥಳಿಸಿದ್ದಾರೆ.
ಇದರಿಂದಾಗಿ ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಮಾರಾಮಾರಿಯಾಗಿದೆ. ಕೈಯಲ್ಲಿ ಕೋಲುಗಳನ್ನು ಹಿಡಿದು ಪರಸ್ಪರ ಘರ್ಷಣೆ ನಡೆಸಿದರು. ಕೆಲವರು ಸ್ಥಳೀಯರ ಮನೆ ಕಲ್ಲು ತೂರಿಸಲು ಪ್ರಾರಂಭಿಸಿದರು. ಅಷ್ಟರಲ್ಲಿ ಪೊಲೀಸರು ಸ್ಥಳಕ್ಕೆ ತಲುಪಿ ಪರಿಸ್ಥಿತಿಯನ್ನು ನಿಯಂತ್ರಿಸಿದರು.
ಆದರೆ ಈ ನಡುವೆಯೇ 35 ವರ್ಷದ ಕನ್ಹಯ್ಯಾಲಾಲ್ ಮತ್ತು ಅವರ 57 ವರ್ಷದ ತಂದೆ ಪ್ಯಾರೆಲಾಲ್ ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡರು. ಇನ್ನೂ 10 ಜನರಿಗೆ ಗಾಯವಾಯಿತು. ಎಲ್ಲರನ್ನೂ ತಕ್ಷಣ ಸ್ಥಳೀಯ ಆಸ್ಪತ್ರೆಗೆ ಸಾಗಿಸಲಾಯಿತು.
ಗಂಭೀರವಾಗಿ ಗಾಯಗೊಂಡಿದ್ದ ಮಗ ಕನ್ಹಯ್ಯಾಲಾಲ್ ಮಾರ್ಗಮಧ್ಯೆಯೇ ಮೃತಪಟ್ಟರೆ, ತಲೆಗೆ ಗಂಭೀರವಾದ ಗಾಯಗಳಿಗೆ ಚಿಕಿತ್ಸೆ ಪಡೆಯುತ್ತಿರುವಾಗ ತಂದೆ ಪ್ಯಾರೆಲಾಲ್ ಮೃತಪಟ್ಟರು.
ಈ ಪ್ರಕರಣದಲ್ಲಿ ನಾವು ಈವರೆಗೆ 22 ಜನರನ್ನು ವಶಕ್ಕೆ ಪಡೆದಿದ್ದೇವೆ. ಸಂಪೂರ್ಣ ವಿಷಯವನ್ನು ತನಿಖೆ ಮಾಡುತ್ತಿದ್ದೇವೆ ಮತ್ತು ಸಾಕ್ಷ್ಯಗಳನ್ನು ಸಂಗ್ರಹಿಸುತ್ತಿದ್ದೇವೆ ಎಂದು ಸಿಕಾರ್ ಪೊಲೀಸ್ ವರಿಷ್ಠಾಧಿಕಾರಿ ಗಗನ್ದೀಪ್ ಸಿಂಗ್ಲಾ ಹೇಳಿದ್ದಾರೆ.