

ಜೈಪುರ್: ರಾಜಸ್ಥಾನದ 4,371 ಪಂಚಾಯತ್ ಸಮಿತಿ ವಾರ್ಡ್ಗೆ ನಡೆದ ಚುನಾವಣೆಯಲ್ಲಿ ಬಿಜೆಪಿ 1,835 ವಾರ್ಡ್ಗಳಲ್ಲಿ ಗೆಲುವು ಸಾಧಿಸಿದೆ. ಈ ಮೂಲಕ ಆಡಳಿತ ಚುಕ್ಕಾಣಿ ಹಿಡಿದಿದೆ.
ಬಿಜೆಪಿ ಆಡಳಿತಾರೂಢ ಕಾಂಗ್ರೆಸ್ ವಿರುದ್ಧ ಭರ್ಜರಿ ವಿಜಯ ಸಾಧಿಸಿರುವ ಹಿನ್ನೆಲೆಯಲ್ಲಿ ಪಂಚಾಯತ್ ಚುನಾವಣೆಯಲ್ಲಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ನೇತೃತ್ವದ ಕಾಂಗ್ರೆಸ್ ಸರ್ಕಾರಕ್ಕೆ ಭಾರೀ ಹಿನ್ನಡೆಯಾಗಿದೆ.
ಕಾಂಗ್ರೆಸ್ 1,718 ಸ್ಥಾನಗಳನ್ನು ಗೆದ್ದುಕೊಂಡಿದ್ದರೆ, ರಾಷ್ಟ್ರೀಯ ಲೋಕತಾಂತ್ರಿಕ ಪಕ್ಷ 56, ಸಿಪಿಎಂ 16 ಹಾಗೂ ಮಾಯಾವತಿ ನೇತೃತ್ವದ ಬಿಎಸ್ಪಿ ಕೇವಲ 3 ವಾರ್ಡ್ಗಳಲ್ಲಿ, ಪಕ್ಷೇತರರು 420 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದಾರೆ.
ರಾಜ್ಯದ 21 ಜಿಲ್ಲಾ ಪರಿಷತ್ ಕ್ಷೇತ್ರದ 636 ವಾರ್ಡ್ಗಳ ಪೈಕಿ 597 ವಾರ್ಡ್ಗಳ ಫಲಿತಾಂಶವನ್ನು ನಿನ್ನೆ (ಮಂಗಳವಾರ) ರಾತ್ರಿ 11.30ಕ್ಕೆ ಚುನಾವಣಾ ಆಯೋಗ ಘೋಷಿಸಿದ್ದು, 11 ಜಿಲ್ಲಾ ಪರಿಷತ್ನಲ್ಲಿ ಪೂರ್ಣ ಬಹುಮತವನ್ನು ಬಿಜೆಪಿ ಪಡೆದಿದೆ. ಕಾಂಗ್ರೆಸ್ 204 ಸ್ಥಾನಗಳನ್ನು ಗೆದ್ದುಕೊಂಡಿದೆ.