

ನವದೆಹಲಿ: ಸದ್ಯ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಸಂಬಂಧಿಸಿದಂತೆ ಉಂಟಾಗಿರುವ ಬಿಕ್ಕಟ್ಟಿನ ಶಮನಕ್ಕೆ ಮಾಜಿ ಸಂಸದೆ, ಚಿತ್ರನಟಿ ರಮ್ಯಾ ಪ್ರವೇಶ ಮಾಡಿದ್ದು, ರಾಹುಲ್ ಗಾಂಧಿ ಬೆಂಬಲಕ್ಕೆ ನಿಂತಿದ್ದಾರೆ.
ಕಾಂಗ್ರೆಸ್ ಅಧ್ಯಕ್ಷ ಸ್ಥಾನವನ್ನು ಯಾರಿಗೆ ನೀಡಬೇಕು ಎಂಬ ಮೂಲ ವಿಷಯವನ್ನು ಇಟ್ಟುಕೊಂಡು ನಡೆಯುತ್ತಿರುವ ಕಾರ್ಯಕಾರಿ ಸಮಿತಿಯ ಸಭೆಯಲ್ಲಿ ಪತ್ರ ಬಂಡಾಯದ ಬಗ್ಗೆ ಈಗ ಭಾರೀ ಚರ್ಚೆ ಆಗುತ್ತಿದೆ. ಕಾಂಗ್ರೆಸ್ನಲ್ಲಿ ನಡೆದಿರುವ ಸಭೆಯ ಕುರಿತು ಮಾಧ್ಯಮಗಳಿಗೆ ಮಾಹಿತಿ ಸೋರಿಕೆ ಮಾಡಿದವರ ಮೇಲೆ ರಮ್ಯಾ ಕಿಡಿಕಿಡಿಯಾಗಿದ್ದಾರೆ.
ಈ ಕುರಿತಂತೆ ಟ್ವೀಟ್ ಮಾಡಿರುವ ಅವರು, ಬಂಡಾಯಕ್ಕೆ ಕಾರಣವಾದ 23 ಮಂದಿ ಪತ್ರ ಬರೆದು ಅದನ್ನು ಮಾಧ್ಯಮಗಳಿಗೆ ಸೋರಿಕೆ ಮಾಡಿದ್ದಾರೆ. ಅಲ್ಲದೆ ಕಾಂಗ್ರೆಸ್ ಸಭೆಯ ಇಂಚಿಂಚು ಮಾಹಿತಿಗಳನ್ನು ನೀಡುವ ಮೂಲಕ ಎಲ್ಲಾ ವಿಚಾರಗಳನ್ನು ಸೋರಿಕೆ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅವರ ಈ ಟ್ವೀಟ್ ನೋಡಿದರೆ ಇವರು ರಾಹುಲ್ ಗಾಂಧಿಯವರ ಬೆಂಬಲಕ್ಕೆ ಬಂದಿರುವುದಾಗಿ ಗೋಚರಿಸುತ್ತದೆ.
ಕಾರ್ಯಕಾರಿ ಸಮಿತಿಯ ಸಭೆಯು ಆನ್ಲೈನ್ ಮೂಲಕ ನಡೆಯುತ್ತಿದ್ದು, ಹಿರಿಯ ನಾಯಕರು ಇದರಲ್ಲಿ ಪಾಲ್ಗೊಂಡಿದ್ದಾರೆ. ಸಭೆಯ ಆರಂಭದಲ್ಲೇ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ 'ಹೊಸ ಅಧ್ಯಕ್ಷರನ್ನು ಹುಡುಕಿ. ನಾನು ಅಧ್ಯಕ್ಷ ಸ್ಥಾನದಲ್ಲಿ ಮುಂದುವರಿಯುವುದಿಲ್ಲ' ಎಂದು ಹೇಳಿದ್ದಾರೆ.
ಈ ವೇಳೆ 20 ಪ್ರಮುಖರ ನಾಯಕರು ಪತ್ರ ಬರೆದ ವಿಚಾರಕ್ಕೆ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ ಸಿ ವೇಣುಗೋಪಾಲ್ ಅಸಮಾಧಾನ ವ್ಯಕ್ತಪಡಿಸಿದರು. ಕೋವಿಡ್ 19, ಮಧ್ಯಪ್ರದೇಶ, ರಾಜಸ್ಥಾನ ಬಿಕ್ಕಟ್ಟಿನ ಸಮಯದಲ್ಲಿ ಹಿರಿಯ ನಾಯಕರಾದವರು ಈ ರೀತಿ ಪತ್ರ ಬರೆಯುವುದು ಸರಿಯಲ್ಲ ಎಂದು ರಾಹುಲ್ ಆಕ್ಷೇಪ ವ್ಯಕ್ತಪಡಿಸಿದರು.
ಸೋನಿಯಗಾಂಧಿ ಅವರಿಗೆ ಆರೋಗ್ಯ ಸಮಸ್ಯೆ ಇದೆ. ಅವರು ಆಸ್ಪತ್ರೆ ದಾಖಲಾದ ವೇಳೆ ಪತ್ರ ಬರೆಯುವುದು ಎಷ್ಟು ಸರಿ ಎಂದು ಪ್ರಶ್ನಿಸಿ ರಾಹುಲ್ ಗಾಂಧಿ ಆಕ್ರೋಶ ವ್ಯಕ್ತಪಡಿಸಿದರು ಎನ್ನಲಾಗುತ್ತಿದೆ.