

ಪಂಜಾಬ್: ಈ ಹಿಂದೆ ಭಯೋತ್ಪಾದರ ದಾಳಿಯಿಂದ ಹಲವು ಬಾರಿ ತಪ್ಪಿಸಿಕೊಂಡಿದ್ದ ಪಂಜಾಬ್ನ ಶೌರ್ಯಚಕ್ರ ಪ್ರಶಸ್ತಿ ಪುರಸ್ಕೃತ, ಮಾಜಿ ಯೋಧ ಬಲ್ವಿಂದರ್ ಸಿಂಗ್ (62) ಇದೀಗ ಗುಂಡಿಗೆ ಬಲಿಯಾಗಿದ್ದಾರೆ.
ಪಂಜಾಬ್ನ ತಾರ್ನ್ ತರಣ್ ಜಿಲ್ಲೆಯಲ್ಲಿ ಈ ಘಟನೆ ಸಂಭವಿಸಿದೆ. ಭಯೋತ್ಪಾದಕರು ಗುಂಡಿಕ್ಕಿ ಸಿಂಗ್ ಅವರನ್ನು ಕೊಂದಿದ್ದಾರೆ. ಭಿಖಿವಿಂದ್ ಗ್ರಾಮದಲ್ಲಿ ಬಲ್ವಿಂದರ್ ಸಿಂಗ್ ತಮ್ಮ ಕಚೇರಿಯಲ್ಲಿದ್ದಾಗ ಮೋಟಾರ್ ಸೈಕಲ್ನಲ್ಲಿ ಬಂದ ಉಗ್ರರು ಈ ಕೃತ್ಯ ಎಸಗಿದ್ದಾರೆ.
ಬಲ್ವಿಂದರ್ ಸಿಂಗ್ ಅವರು ಭಯೋತ್ಪಾದನೆ ವಿರುದ್ಧ ಹಿಂದೆ ಹಲವಾರು ಬಾರಿ ಹೋರಾಟ ನಡೆಸಿದ್ದರು. ಉಗ್ರರನ್ನು ಹೊಡೆದೋಡಿಸುವಲ್ಲಿ ಸಾಹಸ ಪ್ರದರ್ಶಿಸಿದ್ದರು. ಇದೇ ಕಾರಣಕ್ಕೆ ಇವರಿಗೆ ಕೇಂದ್ರ ಸರ್ಕಾರದ ಅತ್ಯುನ್ನತ ಗೌರವವಾದ ಶೌರ್ಯಚಕ್ರ ಪ್ರಶಸ್ತಿ ಲಭಿಸಿತ್ತು.
ಇವರ ಮೇಲೆ ಸದಾ ಕಣ್ಣಿಟ್ಟಿದ್ದ ಉಗ್ರರು ಈ ಹಿಂದೆ ಅನೇಕ ಬಾರಿ ಹಲ್ಲೆಗೆ ಯತ್ನಿಸಿದ್ದರು. ಇದರಿಂದಾಗಿ ಇವರಿಗೆ ಭದ್ರತೆ ನೀಡಲಾಗಿತ್ತು. ಆದರೆ ಟಾರ್ನ್ ತರಣ್ ಪೊಲೀಸರ ಶಿಫಾರಸಿನ ಮೇರೆಗೆ ಸಿಂಗ್ ಅವರ ಭದ್ರತಾ ರಕ್ಷಣೆಯನ್ನು ಒಂದು ವರ್ಷದ ಹಿಂದೆ ಪಂಜಾಬ್ ರಾಜ್ಯ ಸರ್ಕಾರ ಹಿಂತೆಗೆದುಕೊಂಡಿತ್ತು. ತಮ್ಮ ಸಹೋದರನಿಗೆ ಹಾಗೂ ಇಡೀ ಕುಟುಂಬ ಭಯೋತ್ಪಾದಕರ ಹಿಟ್ ಪಟ್ಟಿಯಲ್ಲಿದೆ ಎಂದು ಸಿಂಗ್ ಅವರ ಸಹೋದರ ರಂಜಿತ್ ಹೇಳಿದ್ದರೂ ಭದ್ರತೆಯನ್ನು ಹಿಂಪಡೆಯಲಾಗಿತ್ತು.
ಇದೀಗ ಅದೇ ಮುಳುವಾಗಿದೆ. ಅವರ ಕೊಲೆ ಮಾಡಲಾಗಿದೆ. ಬಲ್ವಿಂದರ್ ಸಿಂಗ್ ಅವರಿಗೆ ಅವರ ಧೈರ್ಯದ ಬಗ್ಗೆ ಪಂಜಾಬ್ನಲ್ಲಿ ಅನೇಕ ಸಾಕ್ಷ್ಯಚಿತ್ರಗಳನ್ನು ಸಹ ಮಾಡಲಾಗಿದೆ.