ದೊಡ್ಡಪ್ಪನಿಗೆ ಮಕ್ಕಳಿಲ್ಲ- ಅವರನ್ನು ನೋಡಿಕೊಂಡ ನಮಗೆ ಆಸ್ತಿ ಸಿಗುತ್ತಾ ಅಥವಾ ಸಾಕುಮಗನಿಗೆ ಹೋಗುತ್ತಾ?

nyayadevate
Published on
ನಮ್ಮ ದೊಡ್ಡಪ್ಪನಿಗೆ ಎರಡು ವಿವಾಹ. ಇಬ್ಬರಿಗೂ ಮಕ್ಕಳಿಲ್ಲ. ನಮ್ಮ ದೊಡ್ಡಪ್ಪ ನನ್ನನ್ನು ಸಾಕಿಕೊಂಡಿದ್ದರು. ದೊಡ್ಡಪ್ಪ ಸಾಯುವವರೆಗೆ ನಾನೇ ಅವರ ಕಷ್ಟ ಸುಖ ನೋಡಿಕೊಂಡಿದ್ದು. ಅವರ ಎರಡನೇ ಹೆಂಡತಿ ನಮ್ಮ ದೊಡ್ಡಪ್ಪನನ್ನು ಬಿಟ್ಟಿದ್ದಾರೆ. ಇತ್ತೀಚೆಗೆ ಸಾಯಲು ಆರುತಿಂಗಳ ಮುಂಚೆ ಅವರಿವರ ಮಾತು ಕೇಳಿ ನಮ್ಮ ದೊಡ್ಡಪ್ಪ ಎರಡನೇ ಹೆಂಡತಿ ಹತ್ತಿರ ಹೋಗಿ, ಅವರಿಗೇ ಆಸ್ತಿ ಎಲ್ಲಾ ಮಾಡಿಕೊಟ್ಟಿದ್ದಾರೆ. ಈ ಆ ಎರಡನೇ ಹೆಂಡತಿ ಆಸ್ತಿಯನ್ನೆಲ್ಲಾ ಆಕೆಯ ಸಾಕು ಮಗನಿಗೆ ವಿಲ್‌ ಮಾಡಿದ್ದಾರೆ. ನಮ್ಮ ದೊಡ್ಡಪ್ಪನ ಮೊದಲ ಹೆಂಡತಿಯನ್ನು ನಾನೇ ನೋಡಿಕೊಳ್ಳುತ್ತಿದ್ದೇನೆ. ನಮಗೆ ಆಸ್ತಿಯಲ್ಲಿ ಪಾಲು ಇದೆಯೇ?

ಉತ್ತರ: ನಿಮ್ಮ ದೊಡ್ಡಪ್ಪ ತನ್ನ ಸ್ವಯಾರ್ಜಿತ ಆಸ್ತಿಯನ್ನು ಯಾರಿಗೆ ಬೇಕಾದರೂ ಹೇಗೆ ಬೇಕಾದರೂ ಪರಭಾರೆ ಮಾಡಬಹುದು. ಅದನ್ನು ಯಾರೂ ಪ್ರಶ್ನೆ ಮಾಡಲು ಕಾನೂನಿನಲ್ಲಿ ಅವಕಾಶ ಇಲ್ಲ. ಸಾಕು ಮಗನಿಗೆ ಆಸ್ತಿಯಲ್ಲಿ ಹಕ್ಕು ಬರುವುದಿಲ್ಲ. ನಿಮ್ಮ ದೊಡ್ಡಪ್ಪನಿಗೆ ನೀವು ಸ್ವಂತ ಮಗ ಅಥವಾ ದತ್ತು ಪುತ್ರ ಆಗಿದ್ದರೆ , ಹಾಗೂ ಅವರು ಬದುಕಿರುವ ಕಾಲದಲ್ಲಿ ತಮ್ಮ ಆಸ್ತಿಯನ್ನು ಯಾರಿಗೂ ಪರಭಾರೆ ಮಾಡದೇ ಇದ್ದಿದ್ದರೆ , ಆಗ ಮಾತ್ರ ಸ್ವಂತ ಮಗ/ದತ್ತು ಪತ್ರನಿಗೆ ಭಾಗ ಬರುತ್ತಿತ್ತು.

ನಿಮ್ಮ ದೊಡ್ಡಪ್ಪ ಅವರ ಎರಡನೇ ಹೆಂಡತಿಗೆ ಯಾವ ರೀತಿ ಆಸ್ತಿ ಮಾಡಿಕೊಟ್ಟಿದ್ದಾರೆ ಎನ್ನುವುದು ನಿಮ್ಮ ಪತ್ರದಿಂದ ತಿಳಿಯುತ್ತಿಲ್ಲ. ಒಂದು ವೇಳೆ ಅವರ ಎರಡನೇ ಹೆಂಡತಿ ಮೋಸ ಮಾಡಿ , ನಿಮ್ಮ ದೊಡ್ಡಪ್ಪನಿಂದ ಆಸ್ತಿಯ ಹಕ್ಕು ಬದಲಾವಣೆ ಪತ್ರ ಮಾಡಿಸಿಕೊಂಡಿದ್ದರೆ ಅದನ್ನು ನಿಮ್ಮ ದೊಡ್ಡಪ್ಪನ ಮೊದಲ ಹೆಂಡತಿ ಪ್ರಶ್ನೆ ಮಾಡಬಹುದು.

ಹಾಗೆಯೇ ಆಕೆ ತನ್ನ ಜೀವನಾಂಶದ ಹಕ್ಕನ್ನೂ ನ್ಯಾಯಾಲಯದ ಮುಂದೆ ನಿವೇದಿಸಿಕೊಳ್ಳಬಹುದು.

ಮೊದಲ ಹೆಂಡತಿ ಬದುಕಿದ್ದಾಗ ಎರಡನೇ ಹೆಂಡತಿಗೆ ಕಾನೂನಿನಲ್ಲಿ ಆಸ್ತಿಯ ಹಕ್ಕು ಬರುವುದಿಲ್ಲ. ಆದರೆ, ಎರಡನೇ ಹೆಂಡತಿಗೆ ನಿಮ್ಮ ದೊಡ್ಡಪ್ಪ ಯಾವ ರೀತಿಯ ಪತ್ರ ಬರೆದುಕೊಟ್ಟಿದ್ದಾರೆ, ಯಾವ ಸ್ಥಿತಿಯಲ್ಲಿ ಇದ್ದಾಗ ಬರೆದುಕೊಟ್ಟಿದ್ದಾರೆ ಎನ್ನುವುದರ ಮೇಲೆ , ಸಂಬಂಧ ಪಟ್ಟ ಪತ್ರಗಳನ್ನು ನೋಡಿ , ನಿಮ್ಮ ದೊಡ್ಡಮ್ಮ ಯಾವರೀತಿಯ ದಾವೆಯನ್ನು ಹಾಕಬೇಕು ಎನ್ನುವುದನ್ನು ವಕೀಲರು ತಿಳಿಸಿಕೊಡುತ್ತಾರೆ.

ಕಾನೂನಿಗೆ ಸಂಬಂಧಿಸಿದ ಇತರ ಪ್ರಶ್ನೋತ್ತರಗಳಿಗಾಗಿ ಈ ಲಿಂಕ್​ ಕ್ಲಿಕ್ಕಿಸಿ   https://www.vijayavani.net/category/%e0%b2%a8%e0%b3%8d%e0%b2%af%e0%b2%be%e0%b2%af%e0%b2%a6%e0%b3%87%e0%b2%b5%e0%b2%a4%e0%b3%86/

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net