

ಇಂದೋರ್: 11 ವರ್ಷದ ಬಾಲಕ 9 ವರ್ಷದ ಬಾಲಕಿಯ ತಲೆಯನ್ನು ಕಲ್ಲಿನಿಂದ ಹೊಡೆದು ಸಾಯಿಸಿರುವ ಭಯಾನಕ ಘಟನೆ ಮಧ್ಯಪ್ರದೇಶದ ಇಂದೋರ್ನಲ್ಲಿ ನಡೆದಿದೆ.
ಅಷ್ಟಕ್ಕೂ ಇಂಥದ್ದೊಂದು ಘನಘೋರ ಕೃತ್ಯ ಎಸಗಲು ಕಾರಣ ಏನೆಂದರೆ ಆತ, ಪದೇ ಪದೇ ಅನ್ಲೈನ್ ವಿಡಿಯೋ ಗೇಮ್ನಲ್ಲಿ ಸೋಲುತ್ತಿದ್ದನೆಂದು!
ನಿನ್ನೆ ಮನೆಯಿಂದ ಹೋದ ಬಾಲಕಿ ಎಷ್ಟು ಹೊತ್ತಾದರೂ ಮನೆಗೆ ಮರಳದ ಕಾರಣ, ಎಲ್ಲೆಡೆ ಆಕೆಯ ಹುಡುಕಾಟ ನಡೆಸಲಾಯಿತು. ನಂತರ ಆಕೆ ಎಲ್ಲಿಯೂ ಪತ್ತೆಯಾಗಲಿಲ್ಲ. ಭಯದಿಂದ ಪಾಲಕರು ಪೊಲಿಸರಿಗೆ ಕಂಪ್ಲೇಂಟ್ ನೀಡಿದ್ದಾರೆ.
ಬಾಲಕಿಗಾಗಿ ಹುಡುಕಾಟ ನಡೆಸಿದಾಗ ಮನೆಯ ಸಮೀಪವೇ ಆಕೆಯ ಮೃತದೇಹ ಪತ್ತೆಯಾಗಿದೆ. ಬಾಲಕಿಯನ್ನು ಕಲ್ಲಿನಿಂದ ಹೊಡೆದು ಸಾಯಿಸಿರುವುದು ತಿಳಿದಿದೆ.
ನಂತರ ತನಿಖೆ ನಡೆಸಿದಾಗ ಬಾಲಕಿ ಬಾಲಕನ ಜತೆ ಇದ್ದುದು ತಿಳಿಯಿತು. ಬಾಲಕನನ್ನು ಪೊಲೀಸರು ವಿಚಾರಿಸಿದಾಗ ತಾನು ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ.
ನಾನು ಮತ್ತು ಅವಳು ಆನ್ಲೈನ್ ಗೇಮ್ ಆಡುತ್ತಿದ್ದೆವು. ಹಲವು ತಿಂಗಳುಗಳಿಂದ ನಾವಿಬ್ಬರೂ ಆಡುತ್ತಿದ್ದೆವು. ಸದಾ ಅವಳು ನನ್ನನ್ನು ಸೋಲಿಸುತ್ತಿದ್ದಳು. ಮಾತ್ರವಲ್ಲದೇ ನಾಲ್ಕೈದು ತಿಂಗಳ ಹಿಂದೆ ನನ್ನ ಇಲಿಯನ್ನೂ ಅವಳು ಸಾಯಿಸಿದ್ದಳು. ಯಾವತ್ತೂ ನನಗೆ ಗೆಲ್ಲಲು ಬಿಡುತ್ತಿರಲಿಲ್ಲ. ಆದ್ದರಿಂದ ಸಿಟ್ಟಿನಿಂದ ಕಲ್ಲಿನಿಂದ ಹೊಡೆದು ಕೊಂದೆ ಎಂದಿದ್ದಾನೆ.
ಬಾಲಕನ ವಿರುದ್ಧ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ ಎಂದು ಇಂದೋರ್ನ ಪೊಲೀಸ್ ಉಪ ಇನ್ಸ್ಪೆಕ್ಟರ್ ಜನರಲ್ (ಡಿಐಜಿ) ಹರಿನಾರಾಯಂಚಾರಿ ಮಿಶ್ರಾ ಹೇಳಿದ್ದಾರೆ.