

ನವದೆಹಲಿ: ಸಲಿಂಗಕಾಮಿಗಳ ಆ್ಯಪ್ನಲ್ಲಿ (ಗೇ ಆ್ಯಪ್) ಯುವಕನೊಬ್ಬನನ್ನು ಪರಿಚಯ ಮಾಡಿಕೊಂಡ ಇನ್ನೊಬ್ಬ ಯುವಕ, ಅವನನ್ನು ಸರಸಕ್ಕೆ ಕರೆದು ಮಾಡಬಾರದ ಕೃತ್ಯ ಮಾಡಿರುವ ಭೀಕರ ಘಟನೆ ದೆಹಲಿಯಲ್ಲಿ ನಡೆದಿದೆ.
ಆಟೋಮೊಬೈಲ್ ಕಂಪನಿಯೊಂದರಲ್ಲಿ ಉದ್ಯೋಗಿಯಾಗಿದ್ದ 25 ವರ್ಷದ ಸನ್ನಿ ದಯಾಲ್ ಗೇ ಡೇಟಿಂಗ್ ಆ್ಯಪ್ನಲ್ಲಿ ಯುವಕರಿಗಾಗಿ ಹುಡುಕಾಟ ನಡೆಸುತ್ತಿದ್ದ. ಅದೇ ಸಮಯದಲ್ಲಿ ಸುಮಿತ್ ಡಬ್ಬಾ ಎಂಬ 20 ವರ್ಷದವನ ಪರಿಚಯವಾಗಿದೆ. ಈತ, ಆತನನ್ನು ಸರಸಕ್ಕೆಂದು ಕರೆದಿದ್ದಾನೆ.
ಸುಮಿತ್ನ ಮಾತು ಕೇಳಿ ದಯಾಲ್ ಅವನು ಹೇಳಿದ್ದಲ್ಲಿ ಹೋಗಿದ್ದಾನೆ. ನಂತರ ಸುಮಿತ್ ತನ್ನ ಇನ್ನೋರ್ವ ಸ್ನೇಹಿತ ಕಾರ್ತಿಕ್ ಜತೆಗೂಡಿ ಸನ್ನಿಯನ್ನು ಕಾಡಿಗೆ ಕರೆದುಕೊಂಡು ಹೋಗಿದ್ದಾನೆ. ಸರಸದ ಆಸೆಯಲ್ಲಿದ್ದ ಸುಮಿತ್ ಆ ಯುವಕರಿಬ್ಬರ ಜತೆಗೆ ಹೋಗಿದ್ದಾನೆ.
ಕಾಡಿಗೆ ಹೋದ ಬಳಿಕ ಈ ಇಬ್ಬರು ಯುವಕರು ಸನ್ನಿಯನ್ನು ಚಾಕುವಿನಿಂದ ಇರಿದು ಕೊಂದು, ಆತನ ಬಳಿ ಇರುವ ಮೊಬೈಲ್, ಹಣವನ್ನು ಕಿತ್ತುಕೊಂಡು ಪರಾರಿಯಾಗಿದ್ದಾರೆ!
ಕಾಡಿನೊಳಗೆ ಮೃತದೇಹ ನೋಡಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತನಿಖೆ ನಡೆಸಿದ ವೇಳೆ ಆರೋಪಿಗಳು ಬಲೆಗೆ ಬಿದ್ದಿದ್ದಾರೆ. ಗೇ ಆ್ಯಪ್ನಲ್ಲಿ ಪರಿಚಯ ಮಾಡಿಕೊಂಡು ಕಾಡಿಗೆ ಬರುವಂತೆ ಹೇಳಿದೆವು. ಆತನ ಮೊಬೈಲ್ ಕಸಿದುಕೊಂಡು ಎಸ್ಕೇಪ್ ಆಗಲು ಪ್ರಯತ್ನಿಸಿದೆವು. ಅದಕ್ಕೆ ಆತ ವಿರೋಧ ಮಾಡಿದ. ಅದಕ್ಕಾಗಿ ಕೊಲೆ ಮಾಡಿದ್ದೇವೆ ಎಂದು ಆರೋಪಿಗಳು ಒಪ್ಪಿಕೊಂಡಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.