ಕೇರಳ ಸಿಎಂ, ಮುಖಂಡರ ಗಡಗಡ ನಡುಗಿಸಿರುವ ಸ್ಮಗ್ಲಿಂಗ್​ ರಾಣಿಗೆ ಎದೆನೋವು! ಆಸ್ಪತ್ರೆಗೆ ದಾಖಲು

swapna suresh
Published on

ತ್ರಿಶೂರ್​ (ಕೇರಳ): ದೇಶ-ವಿದೇಶಗಳಲ್ಲಿ ಭಾರಿ ಸ್ಮಗ್ಲಿಂಗ್​ ಜಾಲವನ್ನೇ ಹೆಣೆದಿರುವ, ಕೇರಳ ಮುಖ್ಯಮಂತ್ರಿ ಸೇರಿದಂತೆ ರಾಜಕೀಯ ಧುರೀಣರ ಖುರ್ಚಿಯನ್ನೇ ಅಲ್ಲಾಡಿಸಿರುವ ಸ್ಮಗ್ಲಿಂಗ್​ ಕ್ವೀನ್​ ಸ್ವಪ್ನಾ ಸುರೇಶ್​ಗೆ ಎದೆನೋವು ಕಾಣಿಸಿಕೊಂಡಿದೆ.

ರಾಜತಾಂತ್ರಿಕ ಮಾರ್ಗಗಳ ಮೂಲಕ ಕೇರಳ ರಾಜ್ಯದಲ್ಲಿ ಚಿನ್ನ ಕಳ್ಳಸಾಗಣೆ ಮಾಡಿದ ಆರೋಪ ಸ್ವಪ್ನಾ ಸುರೇಶ್ ಮೇಲಿದೆ. 14.82 ಕೋಟಿ ರೂಪಾಯಿ ಮೌಲ್ಯದ 30 ಕೆಜಿ ಚಿನ್ನವನ್ನು ರಾಜತಾಂತ್ರಿಕ ಮಾರ್ಗದ ಮೂಲಕ ಕಳ್ಳಸಾಗಣೆ ಮಾಡಿದ್ದಳು. ಜುಲೈ 5 ರಂದು ಪ್ರಕರಣ ದಾಖಲಾಗಿ ನಂತರದಲ್ಲಿ ಬೆಂಗಳೂರಿನಲ್ಲಿ ಆಕೆಯನ್ನು ಬಂಧಿಸಲಾಗಿದೆ.

ಈ ಘಟನೆಯ ವಿಚಾರಣೆ ಇನ್ನೂ ನಡೆಯುತ್ತಿದೆ. ಈಕೆಯ ಮೇಲೆ ಗಂಭೀರ ಆರೋಪ ಇರುವ ಹಿನ್ನೆಲೆಯಲ್ಲಿ ಜಾಮೀನು ಕೂಡ ಸಿಗಲಿಲ್ಲ. ಚಿನ್ನದ ಸ್ಮಗ್ಲಿಂಗ್​ ಕುರಿತಂತೆ ಈಕೆಯ ಹಿನ್ನೆಲೆ ಕೆದಕುತ್ತಾ ಹೋಗಿರುವ ತನಿಖಾಧಿಕಾರಿಗಳಿಗೆ ಬೆಚ್ಚಿಬೀಳಿಸುವಂಥ ಒಂದೊಂದೇ ಮಾಹಿತಿಗಳು ಲಭ್ಯವಾಗುತ್ತಿವೆ. ಸ್ಮಗ್ಲಿಂಗ್​ ಜಾಲದ ವಿಸ್ತಾರ ಅಗೆದಷ್ಟೂ, ಬಗೆದಷ್ಟೂ ಸಿಗುತ್ತಿವೆ.

ಇವೆಲ್ಲವನ್ನೂ ಇಷ್ಟು ವರ್ಷ ನಿರಾತಂಕವಾಗಿ ನಿಭಾಯಿಸುತ್ತಾ ಬಂದಿರುವ ಸ್ವಪ್ನಾ ಸುರೇಶ್​ ತನಗೆ ಎದೆನೋವು ಎಂದು ಹೇಳಿಕೊಂಡಿರುವ ಕಾರಣ, ಆಸ್ಪತ್ರೆಗೆ ದಾಖಲಿಸಲಾಗಿದೆ.ತ್ರಿಶೂರ್ ಜಿಲ್ಲೆಯ ವಿಯೂರ್​ನ ಕೇಂದ್ರ ಕಾರಾಗೃಹದಲ್ಲಿದ್ದ ಈಕೆಗೆ ನಿನ್ನೆ ರಾತ್ರಿ ಎದೆನೋವು ಕಾಣಿಸಿಕೊಂಡಿದೆ.

ತ್ರಿಶೂರ್​ನ ಸರ್ಕಾರಿ ವೈದ್ಯಕೀಯ ಕಾಲೇಜಿನ ಐಸಿಯುಗೆ ಮಂಗಳವಾರ ಸ್ಥಳಾಂತರಿಸಲಾಗಿದೆ. ಸದ್ಯ ಐಸಿಯುಗೆ ಸ್ಥಳಾಂತರ ಮಾಡಲಾಗಿದೆ. ಇಸಿಜಿ ವರದಿಯಲ್ಲಿ ವ್ಯತ್ಯಾಸ ಕಂಡು ಬಂದಿರುವುದು ಗೊತ್ತಾಗಿದೆ. ಆಕೆಯ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ಹೇಳಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net