ಅಜ್ಜಂದಿರಿಗೆ ಗಾಳ ಹಾಕುತ್ತಾಳೆ ಸುಂದರಿ: ಎಂಟು ಮದುವೆಯಾಗಿ ಮಾಡಿದ್ದೇನು ಗೊತ್ತಾ?

marraige
Published on

ಲಖನೌ: ಈಕೆಯ ಹೆಸರು ಮೋನಿಕಾ ಮಲಿಕ್​. ಉತ್ತರ ಪ್ರದೇಶದ ನಿವಾಸಿ. ಈಕೆಯ ಉದ್ಯೋಗವೇ ಅಜ್ಜಂದಿರಿಗೆ ಗಾಳ ಹಾಕಿ ಅವರನ್ನು ಮದುವೆಯಾಗುವುದು!

10 ವರ್ಷಗಳಿಂದ ಇದೇ ಕಸುಬು ಮಾಡಿಕೊಂಡಿರುವ ಈ ಸುಂದರಿ ಇದಾಗಲೇ 8 ಮಂದಿ ಹಿರಿಯ ನಾಗರಿಕರನ್ನು ಬುಟ್ಟಿಗೆ ಬೀಳಿಸಿಕೊಂಡು ಮದುವೆಯಾಗಿದ್ದಾಳೆ. ಅಷ್ಟಕ್ಕೂ ಈಕೆ ಮದುವೆಯಾಗುವ ಕಾರಣ, ಅವರಲ್ಲಿದ್ದ ಎಲ್ಲಾ ನಗದು ಮತ್ತು ಆಭರಣಗಳನ್ನು ದೋಚಿ ಪರಾರಿಯಾಗಲು!

ಗಾಜಿಯಾಬಾದ್‍ನ 66 ವರ್ಷದ ಕಟ್ಟಡ ನಿರ್ಮಾಣ ಗುತ್ತಿಗೆದಾರ ಜುಗಲ್ ಕಿಶೋರ್ ಎಂಬುವವರನ್ನು ಮದುವೆಯಾಗಿ ಮೋಸ ಹೋಗಿದ್ದ ನಂತರ ಈ ಪ್ರಕರಣ ಬೆಳಕಿದೆ ಬಂದಿದೆ.

ಜುಗಲ್ ಕಿಶೋರ್ ಅವರ ಪತ್ನಿ ಮೃತಪಟ್ಟಿದ್ದ ಹಿನ್ನೆಲೆಯಲ್ಲಿ ಮತ್ತೊಂದು ಮದುವೆಯಾಗಬಯಸಿ ವಧು-ವರರ ಕೇಂದ್ರದಲ್ಲಿ ಹೆಸರು ದಾಖಲಿಸಿಕೊಂಡಿದ್ದಾರೆ. ಎಲ್ಲ ಕೇಂದ್ರಗಳಲ್ಲಿಯೂ ತನ್ನ ಹೆಸರನ್ನು ಮೊದಲೇ ವಿಚ್ಛೇದಿತೆ ಎಂದು ದಾಖಲಿಸಿಕೊಂಡಿರುವ ಮೋನಿಕಾಳನ್ನು ಕೇಂದ್ರದವರು ಇವರಿಗೆ ಪರಿಚಯಿಸಿದ್ದಾರೆ. ತಾನೊಬ್ಬಳು ವಿಚ್ಛೇದಿತೆಯಾಗಿದ್ದು, ಅನಾಥೆಯಾಗಿದ್ದೇನೆ. ಎರಡನೆಯ ಮದುವೆಯಾಗಬಯಸುವವರನ್ನು (ವಯಸ್ಸಾದವರಾದರೂ ಪರವಾಗಿಲ್ಲ) ನಾನು ಮದುವೆಯಾಗಬಯಸುತ್ತಿದ್ದೇನೆ ಎಂದು ಅಲ್ಲಿ ನಮೂದು ಮಾಡಿದ್ದಾಳೆ.

ತಮಗಿಂತ ಸುಮಾರು 30 ವರ್ಷ ಚಿಕ್ಕವಳು ಸಿಕ್ಕಳೆಂಬ ಖುಷಿಯಲ್ಲಿ ಜುಗಲ್​ ಕಿಶೋರ್​ ಮದುವೆಯಾಗಿದ್ದಾರೆ. ಮದುವೆಯಾಗಿ ಎರಡೇ ತಿಂಗಳಿಗೆ ಜುಗಲ್​ ಕಿಶೋರ್​ ಅವರ ಪತ್ನಿಯೂ ನಾಪತ್ತೆ, ಜತೆಗೆ ಚಿನ್ನಾಭರಣ, ನಗದು ಎಲ್ಲವೂ ಗಾಯಬ್​!

ಕೇಸು ದಾಖಲು ಮಾಡಲು ಹೋದ ಸಂದರ್ಭದಲ್ಲಿ ಈಕೆಯ ಇನ್ನೊಬ್ಬ ಮಾಜಿ ಪತಿಯ ಪರಿಚಯವಾಗಿದೆ. ತಮ್ಮ ಬಗ್ಗೆ ಪರಸ್ಪರ ಮಾತನಾಡಿಕೊಂಡ ಈ ಇಬ್ಬರು ಹಿರಿಯರು ಆಕೆಯ ಮೂಲ ಕೆದಕಿದಾಗ ಇದಾಗಲೇ ಎಂಟು ಮದುವೆಯಾಗಿ ಎಲ್ಲರ ಹಣ- ಆಭರಣ ದೋಚಿ ಹೋಗಿರುವುದು ತಿಳಿದುಬಂದಿದೆ.

ಸದ್ಯಕ್ಕೆ ಪೊಲೀಸರು ಮೋನಿಕಾ, ಆಕೆಯ ಕುಟುಂಬದ ವಿರುದ್ಧ ದೂರು ದಾಖಲು ಮಾಡಿದ್ದು, ಈಕೆಗಾಗಿ ಬಲೆ ಬೀಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net