ಬಿಜೆಪಿ ಮುಖಂಡನ ಮುಖಕ್ಕೆ ಮಸಿ ಬಳಿದರೆ ಲಕ್ಷ ಬಹುಮಾನ: ಕಾಂಗ್ರೆಸ್‌ ನಾಯಕಿ ಘೋಷಣೆ

pratibha
Published on

ಮಂಗಳೂರು: ಜನಾರ್ದನ ಪೂಜಾರಿ ಮತ್ತು ಬಿಲ್ಲವರ ಆರಾಧ್ಯ ದೈವ ಕೋಟಿ ಚೆನ್ನಯ್ಯರ ವಿರುದ್ಧ ದಕ್ಷಿಣ ಕನ್ನಡ ಬಿಜೆಪಿ ಉಪಾಧ್ಯಕ್ಷ ಜಗದೀಶ್ ಅಧಿಕಾರಿ ಅವಹೇಳನಕಾರಿ ಮಾತನಾಡಿದ್ದಾರೆ ಎಂದು ಆರೋಪಿಸಿರುವ ಕಾಂಗ್ರೆಸ್ ನಾಯಕಿಯೊಬ್ಬರು, ಇವರ ಮುಖಕ್ಕೆ ಮಸಿಬಳಿದರೆ ಒಂದು ಲಕ್ಷ ರೂಪಾಯಿ ಬಹುಮಾನ ನೀಡುವುದಾಗಿ ಹೇಳಿದ್ದಾರೆ.

ಕಾಂಗ್ರೆಸ್ ಮಾಜಿ ಕಾರ್ಪೊರೇಟರ್, ಬಿಲ್ಲವ ನಾಯಕಿ ಪ್ರತಿಭಾ ಕುಳಾಯಿ ಫೇಸ್‌ಬುಕ್‌ ಲೈವ್‌ನಲ್ಲಿ ಬಂದು ಬಿಲ್ಲವ ಯುವಕರು ಯಾರೇ ಆಗಲಿ ಜಗದೀಶ್‌ ಅವರ ಮುಖಕ್ಕೆ ಮಸಿ ಬಳಿದರೆ ಲಕ್ಷ ರೂಪಾಯಿ ನೀಡಿರುವುದಾಗಿ ಹೇಳಿಕೆ ನೀಡಿದ್ದಾರೆ.

ಜನಾರ್ದನ ಪೂಜಾರಿ ಮತ್ತು ಕೋಟಿ ಚೆನ್ನಯ್ಯರ ವಿರುದ್ಧ ಜಗದೀಶ್ ಅಧಿಕಾರಿ ಕೀಳಾಗಿ ಮಾತನಾಡಿದ್ದಾರೆ. ಅವರು ನಾಲ್ಕು ದಿನಗಳ ಒಳಗೆ ಅಧಿಕಾರಿ ಕ್ಷಮೆ ಯಾಚಿಸಬೇಕು. ಗರೋಡಿಗೆ ಹೋಗಿ ಕ್ಷಮೆ ಕೇಳಬೇಕು, ಜನಾರ್ದನ ಪೂಜಾರಿ ಕಾಲಿಗೆ ಬಿದ್ದು ಕ್ಷಮೆ ಕೇಳಬೇಕು ಎಂದು ಪ್ರತಿಭಾ ಒತ್ತಾಯ ಮಾಡಿದ್ದಾರೆ. ಒಂದು ವೇಳೆ ಹೀಗೆ ಮಾಡದೇ ಹೋದರೆ ಅವರ ಮುಖಕ್ಕೆ ಮಸಿ ಬಳಿಯುವ ಬಿಲ್ಲವ ಯುವಕರಿಗೆ ಒಂದು ಲಕ್ಷ ನೀಡುವುದಾಗಿ ಹೇಳಿದ್ದಾರೆ.

ಆಗಿದ್ದೇನು? ವಾಲ್ಪಾಡಿಗುತ್ತುವಿನಲ್ಲಿ ಕೆಲವು ನಡೆದ ನೇಮೋತ್ಸವದ ಧಾರ್ಮಿಕ ಸಭೆ ನಡೆದಿತ್ತು. ಆ ಸಮಯದಲ್ಲಿ ಭಾಷಣ ಮಾಡಿದ್ದ ಜಗದೀಶ್‌ ಅವರು ಪಟ್ಟ ಆದವರ ಕಾಲು ಹಿಡಿಯುತ್ತೇನೆ, ಜನಾರ್ದನ ಪೂಜಾರಿ ಅವರ ಕಾಲು ಹಿಡಿಯುವುದಿಲ್ಲ ಎಂಬ ಹೇಳಿಕೆ ನೀಡಿದ್ದರು. ಈ ರೀತಿ ಏಕೆ ಹೇಳಿದಿರಿ ಎಂದು ಕೇಳಲು ಬಿಲ್ಲವ ಸಮುದಾಯದ ಮುಖಂಡರೊಬ್ಬರು ಜಗದೀಶ್‌ ಅವರಿಗೆ ಕರೆ ಮಾಡಿದ್ದರು.

ಆ ಬಗ್ಗೆ ಜಗದೀಶ್‌ ಅವರು ಏನೋ ಮಾತನಾಡಿ ಸುಮ್ಮನಾಗಿದ್ದರು. ಆದರೆ ಆ ಸಮಯದಲ್ಲಿ ಕಾಲ್‌ ಕಟ್‌ ಮಾಡಿರಲಿಲ್ಲ. ತಮ್ಮ ಜತೆ ಇದ್ದವರ ಜತೆ ಬಿಲ್ಲವ ಸಮುದಾಯದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದರು. ಇದು ರೆಕಾರ್ಡ್ ಆಗಿದ್ದು, ಬಿಲ್ಲವ ಸಮುದಾಯದವರನ್ನು ಕೆರಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net