

ಕ್ಯಾಲಿಫೋರ್ನಿಯಾ: ಪರ್ಸ್ ಒಮ್ಮೆ ಕಳೆದುಹೋಯಿತು ಎಂದರೆ ಅದನ್ನು ವಾಪಸ್ ಪಡೆಯಲು ಹರಸಾಹಸವೇ ಮಾಡಬೇಕು. ಎಷ್ಟೋ ಬಾರಿ ಜಪ್ಪಯ್ಯ ಎಂದರು ಅದು ಸಿಗುವುದೇ ಇಲ್ಲ. ಕೊನೆಯ ಪಕ್ಷ ಹಣವನ್ನಾದರೂ ಇಟ್ಟುಕೊಂಡು ಅದರಲ್ಲಿಯೂ ಕಾರ್ಡ್ಸ್ಗಳನ್ನಾದರೂ ಕೊಡಲಪ್ಪ ಎಂದುಕೊಂಡರೂ ಅದೂ ಸಿಗುವುದೇ ಇಲ್ಲ.
ಆದರೆ ಇಲ್ಲೊಂದು ಅಪರೂಪದ ಪ್ರಕರಣದಲ್ಲಿ 53 ವರ್ಷಗಳ ಹಿಂದೆ ಕಳೆದುಕೊಂಡಿರುವ ಪರ್ಸ್ವೊಂದು ಸಿಕ್ಕಿದೆ. 38ನೇ ವಯಸ್ಸಿನವರಿರುವಾಗ ಕಳೆದುಕೊಂಡ ಪರ್ಸ್ 91ನೇ ವಯಸ್ಸಿನಲ್ಲಿ ಸಿಕ್ಕ ಅಪರೂಪದ ಪ್ರಕರಣವಿದು. ಕ್ಯಾಲಿಫೋರ್ನಿಯಾದ ಪಾಲ್ ಗ್ರಿಶ್ಮ್ ಎಂಬ ವ್ಯಕ್ತಿ ಅಂಟಾರ್ಟಿಕಾದಲ್ಲಿ ಈ ಪರ್ಸ್ ಕಳೆದುಕೊಂಡಿದ್ದರು.
ಇವರು ಆಗ ಅಂದರೆ 1967ರಲ್ಲಿ ಅಮೆರಿಕದಲ್ಲಿ ನೌಕಾಪಡೆಯ ಹವಾಮಾನ ಶಾಸ್ತ್ರಜ್ಞನಾಗಿ ಕಾರ್ಯನಿರ್ವಸುತ್ತಿದ್ದರು. ದಕ್ಷಿಣ ಪಟ್ಟಣದ ಮೆಕ್ಮುರ್ಡೋ ನಿಲ್ದಾಣದಲ್ಲಿರುವ ಕಟ್ಟಡ ನೆಲಸಮಗೊಳಿಸುವ ಸಂದರ್ಭದಲ್ಲಿ ಅವರು ಪರ್ಸ್ ಕಳೆದುಕೊಂಡಿದ್ದರು. ಇವರ ಜತೆ ಅದೇ ವೇಳೆ ಇವರ ಸಹೊದ್ಯೋಗಿ ಸ್ಟಿಫನ್ ಡೆಕಾಟೋ ಎನ್ನುವವರೂ ಪರ್ಸ್ ಕಳೆದುಕೊಂಡಿದ್ದರು. ಎಲ್ಲಿ ಹುಡುಕಾಟ ನಡೆಸಿದರೂ ಸಿಕ್ಕಿರಲಿಲ್ಲ.
ವರ್ಷ ಕಳೆದಂತೆ ಪರ್ಸ್ ಬಗ್ಗೆ ಅವರು ಮರೆತೇ ಹೋಗಿದ್ದರು. ಆದರೆ ಅಚ್ಚರಿ ಎಂದರೆ ಇದೀಗ ಪಾಲ್ ಅವರ ಮನೆಗೆ ಪರ್ಸ್ ಬಂದು ತಲುಪಿದೆ. ಅದನ್ನು ನೋಡಿ ತನ್ನ ಕಣ್ಣುಗಳನ್ನೇ ತಾನು ನಂಬದಾದೆ. ನನಗೆ ಪರ್ಸ್ ಕಳೆದದ್ದು ನೆನಪೇ ಇಲ್ಲ ಎಂದಿದ್ದಾರೆ ಪಾಲ್.
ಅಷ್ಟಕ್ಕೂ ಆಗಿದ್ದೇನೆಂದರೆ ಇವರು ಪರ್ಸ್ ಕಳೆದುಕೊಂಡಿರುವ ಕಟ್ಟಡವನ್ನು ಈಗ ನೆಲಸಮಗೊಳಿಸಲಾಗುತ್ತಿದೆ. ಆಗ ಅಲ್ಲಿ ಪಾಲ್ ಹಾಗೂ ಸ್ಟಿಫನ್ ಅವರ ಪರ್ಸ್ ಸಿಕ್ಕಿದೆ. ಅದರಲ್ಲಿ ಇರುವ ಡ್ರೈವಿಂಗ್ ಲೈಸೆನ್ಸ್ ಸೇರಿದಂತೆ ಕಾರ್ಡ್ಗಳ ಆಧಾರದ ಮೇಲೆ ಇಬ್ಬರ ಮನೆಗೂ ಪರ್ಸ್ ತಲುಪಿಸಲಾಗಿದೆ.
ಪಾಲ್ ಅವರಿಗೆ ಈಗ 91 ವರ್ಷ ವಯಸ್ಸು. ಪರ್ಸ್ನಲ್ಲಿ ಹಣ ಇರದಿದ್ದರೂ ಕಾರ್ಡ್ಗಳನ್ನು ಡುಪ್ಲಿಕೇಟ್ ಮಾಡಿಸಿದ್ದರೂ, ಕಳೆದುಹೋದ ವಸ್ತು ವಾಪಸ್ ಸಿಕ್ಕ ಖುಷಿ. ಆದರೆ ಸ್ಟಿಫನ್ ಅವರು ಇದಾಗಲೇ ಮೃತಪಟ್ಟಿರುವ ಕಾರಣ, ಅವರ ಕುಟುಂಬದವರು ಪರ್ಸ್ ಪಡೆದುಕೊಂಡಿದ್ದಾರೆ.