

ಚೆನ್ನೈ: ಪ್ರತಿಭಾನ್ವಿತೆಯಾಗಿರುವ ಯುವತಿಯೊಬ್ಬಳು, ಐಎಎಸ್ ಮಾಡುವ ಕನಸು ಇಟ್ಟುಕೊಂಡು ಹಗಲೂ ರಾತ್ರಿ ಶ್ರಮಿಸುತ್ತಿದ್ದಾಕೆಯ ಜೀವಕ್ಕೆ ಕುತ್ತಾಗಿ ಹೋಯ್ತು ಪ್ರೇಮ! ಪ್ರೇಮಿಯ ನೋಡಲು ಸಾಹಸ ಮಾಡಲು ಹೋಗಿ ಈಕೆ ಜೀವ ಕಳೆದುಕೊಂಡಿದ್ದಾಳೆ!
ಚೆನ್ನೈನಲ್ಲಿ ನಾಮಕ್ಕಲ್ ಜಿಲ್ಲೆಯ, 25 ವರ್ಷದ ಮಖಿಲಮತಿ ಜೀವ ಕಳೆದುಕೊಂಡಾಕೆ. ಎಂಎಸ್ಸಿ, ಭೌತಶಾಸ್ತ್ರ ಪದವೀಧರಳಾಗಿದ್ದ ಈಕೆ ಐಎಎಸ್ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದ ಈಕೆ ಅದೆಷ್ಟೋ ಕನಸುಗಳನ್ನು ಇಟ್ಟುಕೊಂಡಾಕೆ. ಐಎಎಸ್ ಅಧಿಕಾರಿಯಾಗಲೇಬೇಕೆಂದು ಪಣತೊಟ್ಟು ಹಗಲು-ರಾತ್ರಿ ಓದುತ್ತಿದ್ದಾಕೆ. ಆದರೆ ಆಕೆ ಕನಸು ನನಸು ಮಾಡಿಕೊಳ್ಳುವ ಮೊದಲೇ ಜೀವ ಕಳೆದುಕೊಂಡಿದ್ದಾಳೆ.
ಆಗಿದ್ದೇನೆಂದರೆ, ಮಖಿಲಮತಿ, ಸಾಫ್ಟ್ವೇರ್ ಇಂಜಿನಿಯರ್ ಒಬ್ಬನನ್ನು ಪ್ರೀತಿಸುತ್ತಿದ್ದಳು. ಈಕೆ ವಾಸವಾಗಿರುವ ಅಪಾರ್ಟ್ಮೆಂಟ್ನಲ್ಲಿಯೇ ಯುವಕ 3ನೇ ಮಹಡಿಯಲ್ಲಿ ವಾಸವಾಗಿದ್ದ. ಇವರಿಬ್ಬರೂ ಸದಾ ಭೇಟಿಯಾಗುತ್ತಿದ್ದರು ಎನ್ನಲಾಗಿದೆ. ನಿನ್ನೆ ಈಕೆ ಆತನನ್ನು ನೋಡಲು ರಾತ್ರಿ ಹೋಗಿದ್ದಾಳೆ. ಸ್ನೇಹಿತನ ಮನೆಗೆ ಬಂದು ಬಾಗಿಲು ತಟ್ಟಿದ್ದಾಳೆ. ಆದರೆ ಬಾಗಿಲು ತೆರೆಯಲಿಲ್ಲ. ಮೊಬೈಲ್ಗೆ ಕರೆ ಮಾಡಿದರೂ ಆತ ಕರೆ ಸ್ವೀಕರಿಸಿರಲಿಲ್ಲ. ಇದರಿಂದ ಗಾಬರಿಗೊಂಡ ಮಖಿಲಮತಿ, ತಾನಿರುವ ಮಹಡಿಯಿಂದ ಮೂರನೇ ಫ್ಲೋರ್ಗೆ ಸೀರೆಯನ್ನು ಇಳಿಬಿಟ್ಟು ಹಿಂಬಾಗಿಲಿನ ಮೂಲಕ ಮನೆಗೆ ಪ್ರವೇಶಿಸಲು ಯೋಜಿಸಿದ್ದಳು. ಅದರಂತೆ ಸೀರೆಯನ್ನು ಹಗ್ಗವನ್ನಾಗಿ ಮಾಡಿಕೊಂಡು ಕೆಳಗೆ ಇಳಿಯುತ್ತಿದ್ದಳು. ಈ ಸಂದರ್ಭದಲ್ಲಿ ಸೀರೆ ಹರಿದು ಹೋಗಿದೆ. 3ನೇ ಮಹಡಿಯಿಂದ ಬಿದ್ದು ಸ್ಥಳದಲ್ಲೇ ಈಕೆ ಮೃತಪಟ್ಟಿದ್ದಾಳೆ!
ಸ್ನೇಹಿತನ ವಿಚಾರಣೆಯನ್ನು ಪೊಲೀಸರು ಮಾಡಿದಾಗ ಈ ವಿಷಯ ತಿಳಿದುಬಂದಿದೆ. ಆತ ಕಚೇರಿಯಿಂದ ಸುಸ್ತಾಗಿ ಮನೆಗೆ ಬಂದು ಗಾಢ ನಿದ್ದೆಗೆ ಹೋಗಿದ್ದರಿಂದ ಯುವತಿ ಬಾಗಿಲು ಬಡಿದದ್ದು ಕೇಳಿಸಲಿಲ್ಲ, ಫೋನ್ ರಿಂಗ್ ಆಗಿದ್ದೂ ಗೊತ್ತಾಗಲಿಲ್ಲ ಎಂದಿದ್ದಾನೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.