ಪ್ರವಾದಿ ಮೊಹಮ್ಮದ್​​​ ವಿರುದ್ಧ ಹೇಳಿಕೆ ನೀಡಿ ಕೆಲಸ ಕಳೆದುಕೊಂಡ ಬಿಜೆಪಿ ಶಾಸಕ- ಪಕ್ಷದಿಂದ ಅಮಾನತು

raja2
Published on

ಹೈದರಾಬಾದ್​​: ಮೊಹಮ್ಮದ್ ಪೈಗಂಬರ್ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿರುವ ಆರೋಪದ ಮೇಲೆ ತೆಲಂಗಾಣ ಬಿಜೆಪಿ ಶಾಸಕ ಟಿ. ರಾಜಾ ಸಿಂಗ್ ಅವರನ್ನು ಪೊಲೀಸರು ಬಂಧಿಸಿರುವ ಬೆನ್ನಲ್ಲೇ ಅವರನ್ನು ಪಕ್ಷದಿಂದ ಅಮಾನತು ಮಾಡಲಾಗಿದೆ.

ಹೈದರಾಬಾದ್‌ನಲ್ಲಿ ಸೋಮವಾರ ರಾತ್ರಿ ಶಾಸಕ ರಾಜಾ ಸಿಂಗ್ ಪ್ರವಾದಿ ಕುರಿತು ಮಾತನಾಡುವ ವಿಡಿಯೋವನ್ನು ಬಿಡುಗಡೆ ಮಾಡಿದ ನಂತರ ಪ್ರತಿಭಟನೆ ನಡೆದಿತ್ತು. ಧಾರ್ಮಿಕ ಭಾವನೆಗಳಿಗೆ ಘಾಸಿ ಉಂಟು ಮಾಡಿದ ಆರೋಪ ಇವರ ಮೇಲಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿ ಶಾಸಕನ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಅವರನ್ನು ಬಂಧಿಸಲಾಗಿತ್ತು.

ಮೊಹಮ್ಮದ್ ಪೈಗಂಬರ್ ವಿರುದ್ಧ ಹೇಳಿಕೆ ನೀಡಿದ್ದ ರಾಜಾ ಸಿಂಗ್ ವಿರುದ್ಧ ಹಲವಾರು ದೂರುಗಳು ದಾಖಲಾಗಿವೆ. ಅಷ್ಟೇ ಅಲ್ಲದೆ ಡಬೀರ್‌ಪುರ, ಭವಾನಿ ನಗರ, ರೈನ್‌ಬಜಾರ್‌, ಮೀರ್‌ಚೌಕ್‌ ಪೊಲೀಸ್ ಠಾಣೆಗಳ ಮುಂದೆ ಸಾವಿರಾರು ಸಂಖ್ಯೆಯಲ್ಲಿ ಜನತೆ ಜಮಾಯಿಸಿ ಪ್ರತಿಭಟನೆ ನಡೆಸಿದ್ದಾರೆ.

ಗೋಶಾಮಹಲ್ ಶಾಸಕ ರಾಜಾ ಸಿಂಗ್ ಅವರು ಪ್ರವಾದಿ ಮೊಹಮ್ಮದ್ ಅವರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡುವ ವೀಡಿಯೊವನ್ನು ಬಿಡುಗಡೆ ಮಾಡಿದ ನಂತರ ಸೋಮವಾರ ಮಧ್ಯರಾತ್ರಿ ಮತ್ತು ನಂತರ ಇಂದು ಬೆಳಿಗ್ಗೆ ನಗರ ಪೊಲೀಸ್ ಕಮಿಷನರ್ ಸಿವಿ ಆನಂದ್ ಅವರ ಕಚೇರಿ ಮತ್ತು ಪಟ್ಟಣದ ಇತರ ಭಾಗಗಳಲ್ಲಿ ಪ್ರತಿಭಟನೆಗಳು ನಡೆದವು. ರಾಜಾ ಸಿಂಗ್ ಅವರನ್ನು ತಕ್ಷಣ ಬಂಧಿಸುವಂತೆ ಒತ್ತಾಯಿಸಿದ್ದರು. ಈ ವಿಡಿಯೋದಲ್ಲಿ ರಾಜಾ ಸಿಂಗ್ ಅವರು ಹಾಸ್ಯನಟ ಮುನವ್ವರ್ ಫಾರೂಕಿ ಮತ್ತು ಅವರ ತಾಯಿಯ ಬಗ್ಗೆಯೂ ಕಾಮೆಂಟ್ ಮಾಡಿದ್ದಾರೆ ಎನ್ನಲಾಗಿದೆ.

ಪ್ರತಿಭಟನೆ ತೀವ್ರ ಸ್ವರೂಪ ಪಡೆಯುತ್ತಲೇ ರಾಜಾ ಸಿಂಗ್​ ಅವರನ್ನು ಹೈಕಮಾಂಡ್ ಅಮಾನತು ಮಾಡಿ ಆದೇಶ ಹೊರಡಿಸಿದೆ. ಈ ಕುರಿತು ಕೇಂದ್ರದ ಶಿಸ್ತಿನ ಸಮಿತಿಯ ಸದಸ್ಯ ಕಾರ್ಯದರ್ಶಿ ಓಂ ಪಾಠಕ್​ ಆದೇಶ ಹೊರಡಿಸಿದ್ದಾರೆ. ಬಿಜೆಪಿಯ ನಿಯಮದ ವಿರುದ್ಧವಾಗಿ ನೀವು ನಡೆದುಕೊಂಡಿರುವುದಿಲ್ಲ. ಆದ್ದರಿಂದ ನಿಮ್ಮ ವಿರುದ್ಧ ಇರುವ ಆರೋಪಗಳ ಕುರಿತು ತನಿಖೆ ನಡೆಯುವವರೆಗೆ ನಿಮ್ಮನ್ನು ಪಕ್ಷದಿಂದ ಹಾಗೂ ಎಲ್ಲಾ ಜವಾಬ್ದಾರಿಗಳಿಂದಲೂ ಅಮಾನತುಗೊಳಿಸಲಾಗುತ್ತಿದೆ ಎಂದು ಹೇಳಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net