ದೇವಾಲಯ ಪ್ರವೇಶಿಸಿದ ಸಚಿವ ​ಮನ್ಸೂರಿ: ಮೈತ್ರಿ ಸರ್ಕಾರಕ್ಕೆ ಶುರುವಾಯ್ತು ಸಂಕಟ! ಆಗಿದ್ದೇನು ನೋಡಿ...

temple
Published on

ಗಯಾ (ಬಿಹಾರ): ದೇಶದ ಬಹುತೇಕ ಕಡೆಗಳಲ್ಲಿ ಈಗ ಹಿಂದೂ-ಮುಸ್ಲಿಂ ನಡುವೆ ಗಲಾಟೆ ನಡೆಯುತ್ತಿರುವ ನಡುವೆಯೇ ಬಿಹಾರದ ಮೈತ್ರಿ ಸರ್ಕಾರಕ್ಕೆ ಹೊಸ ಸಂಕಟ ಶುರುವಾಗಿದೆ. ಇತ್ತೀಚೆಗಷ್ಟೇ ಬಿಜೆಪಿ ತೊರೆದು ಹೊಸ ಮೈತ್ರಿ ಸರ್ಕಾರ ರಚನೆ ಮಾಡಿಕೊಂಡಿರುವ ನಿತೀಶ್​ ಕುಮಾರ್​ ಸರ್ಕಾರದ ವಿರುದ್ಧ ಭಾರಿ ಆಕ್ರೋಶ ವ್ಯಕ್ತವಾಗಿದೆ.

ಇದಕ್ಕೆ ಕಾರಣ, ಮುಸ್ಲಿಂ ಸಮುದಾಯದ ಸಚಿವ ಮೊಹಮ್ಮದ್ ಇಸ್ರೇಲ್ ಮನ್ಸೂರಿ ಅವರು ಗಯಾದ ವಿಷ್ಣುಪಾದ್ ದೇವಸ್ಥಾನ ಪ್ರವೇಶಿಸಿರುವುದು! ಅಷ್ಟಕ್ಕೂ ಮುಸ್ಲಿಂ ಧರ್ಮೀಯರೊಬ್ಬರು ದೇವಾಲಯ ಪ್ರವೇಶಿಸಿರುವುದಕ್ಕೆ ಆಕ್ರೋಶ ವ್ಯಕ್ತವಾಗಿರುವ ಕಾರಣ ಏನೆಂದರೆ, ದೇವಾಲಯದ ಸಂಪ್ರದಾಯ ಹಾಗೂ ಇಷ್ಟವರ್ಷ ನಡೆದುಕೊಂಡು ಬಂದಿರುವ ಪದ್ಧತಿ. ಸಚಿವರ ಪ್ರವೇಶವೀಗ ದೇವಾಲಯದ ಆಡಳಿತ ಮಂಡಳಿಯ ತೀವ್ರ ಅಸಮಾಧಾನಕ್ಕೂ ಕಾರಣವಾಗಿದೆ.

ದೇವಾಲಯದಲ್ಲಿ ತಲೆತಲಾಂತರಗಳಿಂದ ನಡೆದುಬಂದಿರುವ ಸಂಪ್ರದಾಯದಂತೆ ವಿಷ್ಣುಪಾದ್​ ದೇವಸ್ಥಾನದಲ್ಲಿ ಹಿಂದೂಯೇತರರಿಗೆ ಪ್ರವೇಶವಿಲ್ಲ. ಇದೇ ಕಾರಣಕ್ಕೆ ಯಾವುದೇ ಅಚಾತುರ್ಯ ನಡೆಯಬಾರದು ಎನ್ನುವ ಕಾರಣಕ್ಕೆ ಮುಖ್ಯದ್ವಾರದ ಮೇಲೆಯೇ ಇದನ್ನು ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ಇಂದೋರ್‌ನ ಮಹಾರಾಣಿ ಅಹಲ್ಯಾಬಾಯಿ ಹೋಳ್ಕರ್ ಸ್ಥಾಪಿಸಿರುವ ಈ ದೇಗುಲದಲ್ಲಿ ಹಿಂದೂಯೇತರರಿಗೆ ಪ್ರವೇಶವಿಲ್ಲ ಎಂದು ಬರೆಯಲಾಗಿದೆ.

ಇದರ ಹೊರತಾಗಿಯೂ ಬಿಹಾರ ಸಿಎಂ ನಿತೀಶ್ ಕುಮಾರ್ ಗಯಾ ಪ್ರವಾಸಕ್ಕೆ ಕೈಗೊಂಡ ಸಂದರ್ಭದಲ್ಲಿ ಅವರು ಗರ್ಭಗುಡಿಯೊಳಕ್ಕೆ ಪ್ರವೇಶಿಸಿ ವಿಶೇಷ ಪೂಜೆ ಸಲ್ಲಿಸಿದ್ದರು. ಈ ಸಂದರ್ಭದಲ್ಲಿ ಪಕ್ಷದ ನಾಯಕರು, ಕಾರ್ಯಕರ್ತರು, ಬಿಹಾರ ಸರ್ಕಾರದ ಮಾಹಿತಿ ಮತ್ತು ತಂತ್ರಜ್ಞಾನ ಸಚಿವ ಮತ್ತು ಗಯಾ ಜಿಲ್ಲಾ ಉಸ್ತುವಾರಿ ಸಚಿವ ಮೊಹಮ್ಮದ್ ಇಸ್ರೇಲ್ ಮನ್ಸೂರಿ ಸೇರಿದಂತೆ ಇತರರು ಹಾಜರಿದ್ದರು.

ನಿತೀಶ್ ಕುಮಾರ್ ಅವರೊಂದಿಗೆ ವಿಷ್ಣುಪಾದ ದೇವಸ್ಥಾನಕ್ಕೆ ಭೇಟಿ ನೀಡುವ ಭಾಗ್ಯ ಸಿಕ್ಕಿತು. ಇದರಿಂದಾಗಿ ನನಗೆ ಅದೃಷ್ಟ ಒಲಿದು ಬಂತು ಎಂದು ಸಚಿವ ಮನ್ಸೂರಿ ಹೇಳಿದರು. ಆದರೆ ಈ ವಿಷಯ ತಿಳಿಯುತ್ತಲೇ ದೇಗುಲದ ಆಡಳಿತ ಮಂಡಳಿ ತೀವ್ರ ಅಸಮಾಧಾನ ಹೊರಹಾಕಿದೆ. ವಿಷ್ಣುಪಾದ್​ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಕಾರ್ಯದರ್ಶಿ ಗಜಧರ್ ಲಾಲ್ ಪಾಠಕ್ ಮಾತನಾಡಿ, ಇದುವರೆಗೂ ಈ ರೀತಿ ಆಗಿಲ್ಲ. ದೇವಸ್ಥಾನದಲ್ಲಿ ಹಿಂದೂಯೇತರ ಪ್ರವೇಶವನ್ನು ನಿಷೇಧಿಸಲಾಗಿದೆ. ಈ ಸಂಪ್ರದಾಯ ಮೊದಲಿನಿಂದಲೂ ನಡೆಯುತ್ತಿದೆ. ಈಗ ಹೀಗೆ ಆಗಿರುವ ಬಗ್ಗೆ ಸಮಿತಿ ಸಭೆ ನಡೆಸಿ ತೀರ್ಮಾನ ಕೈಗೊಳ್ಳಲಿದೆ ಎಂದರು.

ದೇವಾಲಯದ ತಲೆತಲಾಂತರಗಳ ಸಂಪ್ರದಾಯವನ್ನು ಮುರಿದಿರುವ ಕಾರಣ ಬಿಜೆಪಿ ಕೂಡ ನಿತೀಶ್​ಕುಮಾರ್​ ಸರ್ಕಾರದ ವಿರುದ್ಧ ಹರಿಹಾಯ್ದಿದೆ. ಈ ಕುರಿತು ಮಾತನಾಡಿರುವ ಬಿಜೆಪಿ ಶಾಸಕ ಹರಿಭೂಷಣ್ ಠಾಕೂರ್ ಬಚೌಲ್ ವಾಗ್ದಾಳಿ ನಡೆಸಿ, ಅನ್ಯರಿಗೆ ದೇಗುಲದಲ್ಲಿ ಪ್ರವೇಶವಿಲ್ಲ ಎಂದು ಸ್ಪಷ್ಟವಾಗಿ ಬರೆದಿದ್ದರೂ ಮುಖ್ಯಮಂತ್ರಿಯಿಂದ ಕೋಟಿಗಟ್ಟಲೆ ಸನಾತನರು ಮತ್ತು ಹಿಂದೂಗಳ ಭಾವನೆಗಳಿಗೆ ಧಕ್ಕೆಯಾಗಿದೆ ಎಂದಿದ್ದಾರೆ. ಒಟ್ಟಿನಲ್ಲಿ ಹಿಂದೂ-ಮುಸ್ಲಿಂ ನಡುವೆ ನಡೆಯುತ್ತಿರುವ ಜಟಾಪಟಿಯನ್ನು ಈ ಘಟನೆ ಮತ್ತಷ್ಟು ಜಟಿಲಗೊಳಿಸಿದೆ (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net