

ಬೆಳಗಾವಿ: ಪಿಎಸ್ಐ ನೇಮಕಾತಿಗೆ ನಡೆದಿರುವ ಪರೀಕ್ಷೆಯ ಅಕ್ರಮ ಇನ್ನೂ ಹಸಿಹಸಿಯಾಗಿರುವಾಗಲೇ ಈಗ ಶಾಕ್ ನೀಡುತ್ತಿರುವುದು ಕೆಪಿಟಿಸಿಎಲ್ ಕಿರಿಯ ಸಹಾಯಕ ಪರೀಕ್ಷೆ ಅಕ್ರಮ. ಗದಗದ ಕಾಲೇಜೊಂದರಲ್ಲಿ ನಡೆದ ಪರೀಕ್ಷೆಯ ಸಮಯದಲ್ಲಿ ಅಕ್ರಮ ನಡೆದಿರುವುದು ನಿನ್ನೆಯಷ್ಟೇ ಬೆಳಕಿಗೆ ಬಂದಿತ್ತು.
ಆದರೆ ಇದೀಗ ಗದಗ ಮಾತ್ರವಲ್ಲದೇ ಬೆಳಗಾವಿ, ಉತ್ತರ ಕನ್ನಡ ಜಿಲ್ಲೆ ಸೇರಿದಂತೆ ಹಲವೆಡೆ ಅಕ್ರಮದ ಜಾಲ ಸಕ್ರಿಯವಾಗಿ ಗೋಲ್ಮಾಲ್ ನಡೆಸಿರುವುದು ಕಂಡುಬಂದಿದೆ. ಇದಕ್ಕೆ ಸಂಬಂಧಿಸಿದಂತೆ ಬೆಳಗಾವಿ ಜಿಲ್ಲಾ ಪೊಲೀಸರು 9 ಆರೋಪಿಗಳನ್ನು ಬಂಧಿಸಿದ್ದಾರೆ.
ಅಕ್ರಮ ಎಸಗಿ 13 ಜನ ಅಭ್ಯರ್ಥಿಗಳು ಉತ್ತರ ಬರೆದಿರುವ ಮಾಹಿತಿ ಸದ್ಯ ಲಭ್ಯವಾಗಿದ್ದು, ಇವರ ಪಟ್ಟಿ ಬಹುದೊಡ್ಡದಿದೆ ಎಂದು ಅಂದಾಜು ಮಾಡಲಾಗಿದೆ. ಸದ್ಯ ಪರೀಕ್ಷಾ ಅಕ್ರಮದಲ್ಲಿ ಎರಡು ತಂಡ ಸಕ್ರಿಯವಾಗಿರೋ ವಿಚಾರ ಬೆಳಕಿಗೆ ಬಂದಿದೆ.
ಇದೇ 7ರಂದು ಕೆಪಿಟಿಸಿಎಲ್ ಕಿರಿಯ ಸಹಾಯಕ ಹುದ್ದೆಗೆ ಪರೀಕ್ಷೆ ನಡೆದಿತ್ತು. ಗೋಕಾಕ್ ಜಿ. ಎಸ್ ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ ಅಕ್ರಮ ನಡೆದಿರುವುದು ತಿಳಿದಿದೆ. ಪರೀಕ್ಷಾರ್ಥಿಯಿಂದ ಸ್ಮಾರ್ಟ್ ವಾಚ್ ಬಳಸಿ ಅಕ್ರಮ ಎಸಗಲಾಗಿದೆ.
ಸಿದ್ದಪ್ಪ ಮದಿಹಳ್ಳಿ ಪರೀಕ್ಷೆಯಲ್ಲಿ ಅಕ್ರಮ ಎಸಗಿದ್ದ ಆರೋಪಿಯಾಗಿದ್ದಾನೆ. ಸ್ಮಾರ್ಟ್ ವಾಚ್ನಲ್ಲಿ ಪ್ರಶ್ನೆ ಪತ್ರಿಕೆ ಫೋಟೋ ತೆಗೆದು ಅದನ್ನು ಟೆಲಿಗ್ರಾಂ ಆ್ಯಪ್ ಮೂಲಕ ಮತ್ತೊಬ್ಬ ಆರೋಪಿಗೆ ರವಾನೆ ಮಾಡಿರುವುದು ಬೆಳಕಿಗೆ ಬಂದಿದೆ. ಸುನೀಲ್ ಭಂಗಿ ಎನ್ನುವ ಮತ್ತೊಬ್ಬ ಆರೋಪಿಯನ್ನು ಕೂಡ ಪೊಲೀಸರು ಬಂಧಿಸಿದ್ದಾರೆ. ಈತ ಬ್ಲೂ ಟೂತ್ ಡಿವೈಸ್ ಬಳಸಿ ಪರೀಕ್ಷೆಯಲ್ಲಿ ಅಕ್ರಮ ನಡೆಸಿರುವ ಮಾಹಿತಿ ಲಭ್ಯವಾಗಿದೆ. ಇವರಲ್ಲದೇ ಗೋಕಾಕ್ ಸಂತೋಷ್ ಪ್ರಕಾಶ್ ಮಾನಗಾವಿ, ಗದಗ ಜಿಲ್ಲೆ ಬೆಟಗೇರಿಯ ಸಮೀತ್ಕುಮಾರ್ ಮಾರುತಿ, ಮಾರುತಿ ಶಂಕರ ಸೋನವಣೆ, ಹುಕ್ಕೇರಿಯ ಬಸವಣ್ಣಿ ಶಿವಪ್ಪ ದೊಣವಾಡ, ಬೆಟಗೇರಿಯ ಅಮರೇಶ ಚಂದ್ರಶೇಖರಯ್ಯ, ಗೋಕಾಕ್ನ ಸಿದ್ದಪ್ಪ ಕೆಂಚಪ್ಪ ಕೊತ್ತಲ ಹಾಗೂ ಗೋಕಾಕ್ನ ಮಾಲದಿನ್ನಿಯ ರೇಣುಕಾ ವಿಠಲ ಜವಾರಿ ಅವರನ್ನು ಪೊಲೀಸರು ಬಂಧಿಸಿದ್ದಾರೆ.
ಹುಕ್ಕೇರಿ ತಾಲೂಕಿನ ಬಿ ಕೆ ಶಿರಹಟ್ಟಿ ಗ್ರಾಮದ ತೋಟದ ಮನೆಯ ಮೇಲೆ ದಾಳಿ ಮಾಡಲಾಗಿದೆ. ಇಲ್ಲಿ ಮನೆಯಲ್ಲಿ ಕುಳಿತು ಬ್ಲೂ ಟೂತ್ನಲ್ಲಿ ಹಲವರಿಗೆ ಉತ್ತರ ಹೇಳಿದ್ದು ತಿಳಿದುಬಂದಿದೆ. ಆರೋಪಿಗೆ ಗದಗ ನಗರಸಭೆ ಪಿ.ಯು ಕಾಲೇಜಿನ ಕೇಂದ್ರದ ಪ್ರಶ್ನೆ ಪತ್ರಿಕೆ ಲಭ್ಯವಾಗಿತ್ತು. ಇದಾಗಲೇ ಪ್ರಶ್ನೆ ಪತ್ರಿಕೆ ಸೋರಿಕೆ ಮಾಡಿದ್ದ ತಂದೆ, ಮಗನನ್ನು ಬಂಧಿಸಿದ ಬೆಳಗಾವಿ ಪೊಲೀಸರು ಬಂಧಿಸಿದ್ದಾರೆ.
ಪ್ರಕರಣ ಬೆನ್ನತ್ತಿರೋ ಬೆಳಗಾವಿ ಎಸ್ಪಿ ಡಾ. ಸಂಜೀವ್ ಪಾಟೀಲ್ ನೇತೃತ್ವದ ತಂಡವು ಇದನ್ನು ಪತ್ತೆ ಹಚ್ಚಿವೆ. (ದಿಗ್ವಿಜಯ ನ್ಯೂಸ್)