

ನವದೆಹಲಿ: ಆನ್‌ಲೈನ್ ಫುಡ್ ಡೆಲಿವರಿ ಸಂಸ್ಥೆ ಜೊಮ್ಯಾಟೋ ಈಗ ಬಾಯ್ಕಾಟ್ ಬಿಸಿ ಅನುಭವಿಸುತ್ತಿದೆ. ಇದಕ್ಕೆ ಕಾರಣ, ಹೃತಿಕ್ ರೋಷನ್! ಅರ್ಥಾತ್ ಜೊಮ್ಯಾಟೋ ಜಾಹೀರಾತಿನಲ್ಲಿ ಹೃತಿಕ್ ರೋಷನ್ ಅವರು ಆಡುವ ಮಾತು ಒಂದು ಸಮುದಾಯದವರ ಭಾರಿ ಆಕ್ರೋಶಕ್ಕೆ ಕಾರಣವಾಗಿದೆ. ಇದೇ ಕಾರಣಕ್ಕೆ ಜೊಮ್ಯಾಟೋ ಜತೆ ಹೃತಿಕ್ ರೋಷನ್ ಅವರನ್ನೂ ಬಹಿಷ್ಕರಿಸುವ ಅಭಿಯಾನ ಸಾಮಾಜಿಕ ಜಾಲತಾಣದಲ್ಲಿ ಶುರುವಾಗಿದೆ.
ಆಗಿರೋದು ಏನೆಂದರೆ, ಜೊಮ್ಯಾಟೋ 30 ಸೆಕೆಂಡುಗಳ ಜಾಹೀರಾತು ಮಾಡಿದೆ. ಅದರಲ್ಲಿ ನಟ ಹೃತಿಕ್ ರೋಷನ್ ಅಭಿನಯಿಸಿದ್ದಾರೆ. ಹೃತಿಕ್ ಅವರು, ‘ನನಗೆ ಪನ್ನೀರ್ ಥಾಲಿ ತಿನ್ನೋ ಆಸೆ ಆಗಿತ್ತು. ಇದನ್ನು ಮಹಾಕಾಲದಿಂದ ಆರ್ಡರ್ ಮಾಡಿದೆ’ ಎಂದು ಜಾಹೀರಾತಿನಲ್ಲಿ ಹೇಳಿದ್ದಾರೆ. ಇದೇ ಈಗ ಆಕ್ರೋಶಕ್ಕೆ ಕಾರಣವಾಗಿದೆ.
ಏಕೆಂದರೆ, ಮಧ್ಯಪ್ರದೇಶದಲ್ಲಿರುವ ಪ್ರಸಿದ್ಧ ಹಿಂದೂ ದೇವತೆ ಮಹಾಕಾಲ. ಹೃತಿಕ್ ಅವರು ಮಹಾಕಾಲನ ಹೆಸರು ಹೇಳುವ ಮೂಲಕ ಧಾರ್ಮಿಕ ಭಾವನೆಗೆ ಧಕ್ಕೆ ಉಂಟು ಮಾಡಿದ್ದಾರೆ ಎಂದು ಭಕ್ತರು ಆರೋಪಿಸಿದ್ದಾರೆ. ದೇಶದ 12 ಜ್ಯೋತಿರ್ಲಿಂಗಗಳಲ್ಲಿ ಪ್ರಮುಖವಾದ ಉಜ್ಜಯಿನಿಯ ಮಹಾಕಾಲ ದೇವಸ್ಥಾನದ ಬಗ್ಗೆ ಅವಹೇಳನಕಾರಿ ಜಾಹೀರಾತನ್ನು ಪ್ರಸಾರ ಮಾಡಲಾಗಿದೆ ಎಂಬುದು ಅವರ ಆರೋಪ. ಜೊಮ್ಯಾಟೋ ಜತೆಜತೆಗೆ ಹೃತಿಕ್ ರೋಷನ್ ವಿರುದ್ಧವೂ ಇಲ್ಲಿಯ ಜನತೆ ಆಕ್ರೋಶ ವ್ಯಕ್ತಪಡಿಸುತ್ತಿವೆ.
ಅಖಿಲ ಭಾರತ ವ್ಯಾಪಾರಿಗಳ ಒಕ್ಕೂಟ ಕೂಡ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜಸಿಂಗ್ ಚೌಹಾಣ್ ಅವರಿಗೆ ಪತ್ರ ಬರೆದು, ಜೊಮ್ಯಾಟೋ ಹಾಗೂ ನಟ ಹೃತಿಕ್ ರೋಷನ್ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದೆ. ಮಹಾಕಾಲದಲ್ಲಿ ಥಾಲಿಯನ್ನು ಆನ್‌ಲೈನ್ ಡೆಲಿವರಿ ಮಾಡುವುದಿಲ್ಲ. ಭಕ್ತರು ಭಕ್ತಿಯಿಂದ ಸ್ವೀಕರಿಸುವ ಪ್ರಸಾದವದು. ಪ್ರಸಾದದ ಬಗ್ಗೆ ಈ ರೀತಿಯ ಅಸಹ್ಯಕರ ಜಾಹೀರಾತನ್ನು ಸಹಿಸಲು ಸಾಧ್ಯವಿಲ್ಲ’ ಎಂದು ಮಹಾಕಾಲ ದೇವಸ್ಥಾನದ ಮುಖ್ಯ ಅರ್ಚಕರು ಹೇಳಿದ್ದಾರೆ.
ಭಾರಿ ಆಕ್ರೋಶ ವ್ಯಕ್ತವಾಗುತ್ತಲೇ ಜೊಮ್ಯಾಟೋ ಕಂಪೆನಿ ಜನರ ಕ್ಷಮೆ ಕೋರಿದೆ. ನಾವು ಈ ಬಗ್ಗೆ ಪ್ರಾಮಾಣಿಕವಾಗಿ ಕ್ಷಮೆ ಯಾಚಿಸುತ್ತೇವೆ, ಜೊಮ್ಯಾಟೋ ಜಾಹೀರಾತಿನ ಉದ್ದೇಶವು ಎಂದಿಗೂ ಯಾರ ನಂಬಿಕೆಗಳು ಮತ್ತು ಭಾವನೆಗಳನ್ನು ನೋಯಿಸುವುದಲ್ಲ ಅಂತ ಕಂಪೆನಿ ಹೇಳಿದೆ. (ಏಜೆನ್ಸೀಸ್)