ಹನಿಟ್ರ್ಯಾಪ್ ಸುಳಿಯಲ್ಲಿ ಮಂಡ್ಯದ ಬಿಜೆಪಿ ಮುಖಂಡ? ಡ್ರಾಪ್​ ನಿಡೋ ನೆಪದಲ್ಲಿ ಲಾಡ್ಜ್​ಗೆ ಕರೆದೊಯ್ದು ವಿಡಿಯೋ!

mandya
ಆರೋಪಿ ಸಲ್ಮಾಭಾನು ಹಾಗೂ ಜಗನ್ನಾಥ್ ಶೆಟ್ಟಿ
Published on

ಮಂಡ್ಯ: ಡ್ರಾಪ್ ಪಡೆದುಕೊಂಡು ಮಂಡ್ಯದ ಪ್ರತಿಷ್ಠಿತ ಚಿನ್ನದ ವ್ಯಾಪಾರಿ, ಬಿಜೆಪಿ ಮುಖಂಡ ಹನಿಟ್ರ್ಯಾಪ್​ ಬಲೆಗೆ ಬಿದ್ದಿದ್ದು, ಈ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಆರು ತಿಂಗಳ ಹಿಂದೆ ನಡೆದಿರುವ ಈ ಘಟನೆಗೆ ಸಂಬಂಧಿಸಿದಂತೆ ಮಹಿಳೆಯೊಬ್ಬಳನ್ನು ಪೊಲೀಸರು ಬಂಧಿಸಿದ್ದಾರೆ.

ಡ್ರಾಪ್​ ನೀಡುವ ನೆಪದಲ್ಲಿ ಚಿನ್ನದ ವ್ಯಾಪಾರಿ ಜಗನ್ನಾಥ್ ಶೆಟ್ಟಿ ಎನ್ನುವವರನ್ನು ಅಪಹರಣ ಮಾಡಿ, ಲಾಡ್ಜ್​ಗೆ ಕರೆದುಕೊಂಡು ಹೋಗಿ ಯುವತಿಯನ್ನು ಬಿಟ್ಟು ವಿಡಿಯೋ ಚಿತ್ರೀಕರಣ ಮಾಡಿ 50 ಲಕ್ಷ ರೂಪಾಯಿ ವಸೂಲಿ ಮಾಡಿರುವ ಘಟನೆ ಇದಾಗಿದೆ. ​

ಕಳೆದ ಫೆಬ್ರವರಿ 26 ರಂದು ಮೈಸೂರಿನಲ್ಲಿ ಈ ಘಟನೆ ನಡೆದಿತ್ತು. ಇದೀಗ ಆರು ತಿಂಗಳ ಬಳಿಕ ಮಂಡ್ಯ ಪಶ್ಚಿಮ ಪೊಲೀಸ್ ಠಾಣೆಗೆ ಜಗನ್ನಾಥ ಶೆಟ್ಟಿ ದೂರು ದಾಖಲು ಮಾಡಿದ್ದು, ಈ ದೂರು ಆಧರಿಸಿ ಸಲ್ಮಾಭಾನು ಎಂಬ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ.

ಮಂಗಳೂರಿಗೆ ತೆರಳಲು ಆ ರಾತ್ರಿ ಮಂಡ್ಯದಲ್ಲಿ ಬಸ್ಸಿಗಾಗಿ ಕಾಯುತ್ತಿದ್ದ ವೇಳೆ, ಮೈಸೂರಿಗೆ ಡ್ರಾಪ್ ಕೊಡುವುದಾಗಿ ಕಾರಿನಲ್ಲಿ ನಾಲ್ವರು ಕರೆದೊಯ್ದಿದ್ದರು. ಮೈಸೂರಿನ ದರ್ಶನ್ ಪ್ಯಾಲೇಸ್​ಗೆ ಕರೆದುಕೊಂಡು ಹೋಗಿದ್ದ ಗ್ಯಾಂಗ್​ ಯುವತಿಯೊಬ್ಬಳನ್ನು ಅಲ್ಲಿ ಬಿಟ್ಟಿದ್ದರು. ನಂತರ ಅವರ ಜತೆ ಜೊತೆಗಿನ ವಿಡಿಯೋ ಚಿತ್ರೀಕರಣ ಮಾಡಲಾಗಿತ್ತು.

ವಿಡಿಯೋ ಮಾಡುತ್ತ 4 ಕೋಟಿಗೆ ಬೇಡಿಕೆ ಇಡಲಾಗಿತ್ತು. ಅಂತಿಮವಾಗಿ 50 ಲಕ್ಷ ಕೊಟ್ಟು ಬಂದಿರುವುದಾಗಿ ಜಗನ್ನಾಥ ಶೆಟ್ಟಿಯವರು ದೂರಿನಲ್ಲಿ ಹೇಳಿದ್ದಾರೆ. ಇದಾದ ಬಳಿಕ ಪುನಃ ಹಣಕ್ಕೆ ಬೇಡಿಕೆ ಇಟ್ಟ ಕಾರಣ ಅವರು ಇದೀಗ ದೂರು ದಾಖಲು ಮಾಡಿದ್ದಾರೆ.

ಹಣ ಪಡೆದ ಬಳಿಕ ಕೊಲೆ ಬೆದರಿಕೆ ಹಾಕಲಾಗಿತ್ತು. ಆದ್ದರಿಂದ ತಾವು ದೂರು ದಾಖಲು ಮಾಡಿರಲಿಲ್ಲ ಎಂದು ಅವರು ಹೇಳಿದ್ದಾರೆ.

ಅಂದಹಾಗೆ, ಹನಿಟ್ರ್ಯಾಪ್ ಗೆ ಒಳಗಾದ ಜಗನ್ನಾಥ್ ಶೆಟ್ಟಿ ಅವರು ಬಿಜೆಪಿ ಮುಖಂಡ ಹಾಗೂ ಧಾರ್ಮಿಕ ಪರಿಷತ್ ಸದಸ್ಯ ಎನ್ನಲಾಗಿದೆ. ಸ್ವಾಮಿ ವಿವೇಕಾನಂದ ಸೇವಾ ಸಂಸ್ಥೆ ಹೆಸರಿನಲ್ಲಿ ಸಮಾಜಮುಖಿ ಕಾರ್ಯಕ್ರಮಗಳನ್ನು ಇವರು ಆಯೋಜಿಸುತ್ತಿದ್ದಾರೆ (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net