ಸಿನಿ ರಂಗದಲ್ಲಿ ಮತ್ತೊಂದು ಸಂಚಲನ- ಡ್ರಗ್ಸ್​ ಬೆನ್ನಲ್ಲೇ ಸುತ್ತಿಕೊಂಡ್ತು ಗುಟ್ಕಾ: ನಟ ಅರೆಸ್ಟ್​

sachin
Published on

ಮುಂಬೈ: ಸಿನಿಮಾ ಕ್ಷೇತ್ರ ಕಳೆದ ಕೆಲವು ತಿಂಗಳುಗಳಿಂದ ಭಾರಿ ಸದ್ದು ಮಾಡುತ್ತಿದೆ. ಇದೀಗ ಸ್ಯಾಂಡಲ್​ವುಡ್​ನಲ್ಲೂ ಡ್ರಗ್ಸ್​ ನಂಟು ಬಿರುಗಾಳಿ ಎದ್ದಿರುವ ಬೆನ್ನಲ್ಲೇ, ಗುಟ್ಕಾ ನಂಟು ಬಾಲಿವುಡ್ ಹಾಗೂ ಟಾಲಿವುಡ್​ನ ಸುತ್ತುಕೊಂಡಿದೆ.

ಗುಟ್ಕಾ ಕಳ್ಳಸಾಗಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಖ್ಯಾತ ನಟ ಸಚಿನ್ ಜೋಶಿ ಹಾಗೂ ಅವರ ತಂದೆ ಜೆಎಂ ಜೋಷಿ ಅವರನ್ನು ಹೈದರಾಬಾದ್ ಪೊಲೀಸರು ಮುಂಬೈನಲ್ಲಿ ಬಂಧಿಸಿದ್ದಾರೆ. ಶ್ರೀಮಂತ ನಟರಲ್ಲಿ ಒಬ್ಬರು ಎನಿಸಿರುವ ಸಚಿನ್ ಸುತ್ತ ಇದೀಗ ಗುಟ್ಕಾ ಸುತ್ತುಹಾಕಿಕೊಂಡಿದೆ.

ಇತ್ತೀಚೆಗೆ ಹೈದರಾಬಾದ್‌ನಲ್ಲಿ ಗುಟ್ಕಾ ದಂಧೆ ಜೋರಾಗಿ ನಡೆದಿದೆ. ಇದರ ಬೆನ್ನಹಿಂದೆ ಬಿದ್ದ ಪೊಲೀಸರಿಗೆ ಇದೀಗ ಈ ದಂಧೆಗೂ ಸಿನಿರಂಗದ ನಂಟು ಇರುವುದು ತಿಳಿದಿದೆ. ಇದಾಗಲೇ ಕೆಲವು ಗುಟ್ಕಾ ಕಳ್ಳಸಾಗಾಣಿಕೆದಾರನನ್ನು ಬಂಧಿಸಲಾಗಿದೆ. ಆಳವಾಗಿ ವಿಚಾರಣೆ ನಡೆಸಿದಾಗ ಸಚಿನ್​ ಜೋಶಿ ಹೆಸರು ಕೇಳಿಬಂದಿದ್ದು, ಅವರನ್ನೂ ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ.

ಸುಮಾರು 1.25 ಕೋಟಿ ಮೌಲ್ಯದ ಗುಟ್ಕಾ ಪೆಟ್ಟಿಗೆಗಳು ಅಕ್ರಮವಾಗಿ ಸಾಗಿಸುತ್ತಿದ್ದ ಆರೋಪದ ಮೇರೆಗೆ ಕೆಲ ಆರೋಪಿಗಳನ್ನು ವಶಕ್ಕೆ ಪಡೆಯಲಾಗಿತ್ತು. ಈ ಪ್ರಕರಣದಲ್ಲಿ ಇದೀಗ ನಟ ಸಚಿನ್ ಹಾಗೂ ಅವರ ತಂದೆಯನ್ನು ಅವರನ್ನೂ ಬಂಧಿಸಲಾಗಿದೆ ಎನ್ನಲಾಗಿದೆ. ಇವರ ವಿರುದ್ಧ ಐಪಿಸಿಯ ಸೆಕ್ಷನ್ 273, 420 ಮತ್ತು 336 ರ ಅಡಿಯಲ್ಲಿ ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ.

ಈ ವಿಚಾರ ತಿಳಿದ ಸಚಿನ್ ಮುಂಬೈನಿಂದ ದುಬೈಗೆ ಪರಾರಿಯಾಗಲು ಯತ್ನಿಸಿದ್ದರು ಎಂದು ಹೇಳಲಾಗಿದೆ. ಇದೇ ಕಾರಣಕ್ಕೆ ಅವರನ್ನು ಹೈದರಾಬಾದ್​ನ ಸೈಬರಾಬಾದ್ ಪೊಲೀಸರು ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ.

ಅಪ್ಪ 'ಗುಟ್ಕಾ ಕಿಂಗ್'​: ಸಚಿನ್ ತಂದೆ ಜೆ.ಎಂ ಜೋಶಿ ಗುಟ್ಕಾ ವ್ಯವಹಾರದಲ್ಲಿ ಪ್ರಸಿದ್ಧರಾದವರು. ಗೋವಾ ಪಾನ್ ಮಸಾಲಾ ಹೆಸರಿನಲ್ಲಿ ಗುಟ್ಕಾ ಮಾರಾಟ ಮಾಡುತ್ತಿದ್ದರು. ಇದೇ ಕಾರಣಕ್ಕೆ ಅವರನ್ನು ಗುಟ್ಕಾ ಕಿಂಗ್ ಎಂದೂ ಕರೆಯಲಾಗುತ್ತಿತ್ತು. ಆದರೆ ಪೊಲೀಸರ ತನಿಖೆ ವೇಳೆಗೆ ತಿಳಿದುಬಂದಿರುವ ವಿಷಯ ಎಂದರೆ ಗೋವಾ ಪಾನ್ ಮಸಾಲಾಗೆ ಯಾವುದೇ ರೀತಿಯ ಕಾನೂನಾತ್ಮಕ ಪರವಾನಗಿ ಪಡೆದಿರಲಿಲ್ಲ ಎಂಬುದು.

ಇನ್ನು ನಟ ಸಚಿನ್ ಜೋಷಿ ಬಾಲಿವುಡ್ ಮಾತ್ರವಲ್ಲದೇ ಟಾಲಿವುಡ್ ನಲ್ಲೂ ಸಾಕಷ್ಟು ಕೀರ್ತಿ ಗಳಿಸಿದ್ದಾರೆ. `ಆಜನ್`,`ಜಾಕ್‌ಪಾಟ್`, `ಮೌನಮೆಲನೋಯಿ`,`ನಿನು ಚುಡಕಾ ನೆನುಂಡಲೇನು`, ಒರೆ ಪಾಂಡು`, `ವೀರಪ್ಪನ್`,` ವಿವಾಡು`, `ನೆಕ್ಸ್ಟ್ ಏಂಟಿ`, 'ಅಮಾವಾಸ್ಯ` ಸೇರಿದಂತೆ ಅನೇಕ ಚಿತ್ರಗಳಲ್ಲಿ ನಟಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net