

ಡೆಹ್ರಾಡೂನ್: ಹದಗೆಟ್ಟಿರುವ ರಸ್ತೆಗಳ ಕುರಿತು ವರದಿ ಮಾಡಿದ ಉತ್ತರಾಖಂಡದ ಚಮೋಲಿ ಜಿಲ್ಲೆಯಲ್ಲಿ ಬಾಲಕಿಯೊಬ್ಬಳು ಇದೀಗ ಭಾರಿ ಫೇಮಸ್ ಆಗಿದ್ದಾಳೆ. ಇದಕ್ಕೆ ಕಾರಣ, ಇವಳ ವರದಿಯಿಂದಾಗಿ ಅಧಿಕಾರಿಗಳೇ ಎಚ್ಚೆತ್ತುಕೊಂಡು ರಸ್ತೆ ರಿಪೇರಿ ಮಾಡಿಸಿದ್ದಾರೆ!
ಇಂಥದ್ದೊಂದು ಅಪರೂಪದ ವರದಿಗಾರ್ತಿಯಾಗಿರುವ 15 ವರ್ಷ ಬಾಲಕಿಯ ಹೆಸರು ಸುಹಾನಿ ಬೀಸ್ತ್. ಈಕೆಯ ವರದಿಗೆ ಅದೆಷ್ಟು ಪವರ್ ಇತ್ತು ಎಂದರೆ, ಜಿಲ್ಲಾಡಳಿತದ ಗಮನಕ್ಕೆ ಬಂದ 24 ಗಂಟೆಯೊಳಗೆ ರಸ್ತೆ ರಿಪೇರಿ ಮಾಡಲು ಮುಂದಾಗಿದೆ.
ಚಾಮೋಲಿ ಜಿಲ್ಲೆಯ ದೇವರ್ಖಡೋರ ಗ್ರಾಮದಲ್ಲಿ 10 ಕಿ.ಮೀ ಉದ್ದದ ರಸ್ತೆ ನಿರ್ಮಾಣ ಮಾಡಲಾಗಿತ್ತು. ಆದರೆ ಈ ರಸ್ತೆ ನಿರ್ಮಾಣಕ್ಕೆ ಕಳಪೆ ಗುಣಮಟ್ಟದ ವಸ್ತುಗಳನ್ನು ಬಳಸಿದ್ದರಿಂದ ಕೆಲವೇ ದಿನಗಳಲ್ಲಿ ರಸ್ತೆ ತುಂಬಾ ಹೊಂಡ-ಗುಂಡಿಗಳು ಬಿದ್ದಿದ್ದವು.
ಇದೇ ಗ್ರಾಮದ ಬಾಲಕಿ ಸುಹಾನಿ ಗುಂಡಿಗಳಿಂದ ಕೂಡಿದ್ದ ರಸ್ತೆಯಿಂದ ಆಕ್ರೋಶಗೊಂಡು ತಾನೇ ವರದಿ ಮಾಡುವ ಮೂಲಕ ಅಧಿಕಾರಿಗಳ ಕಣ್ಣು ತೆರೆಸಿದ್ದಾಳೆ. ರಸ್ತೆ ರಿಪೇರಿ ಮಾಡಿಸಿ ಮಾದರಿಯಾಗಿದ್ದಾಳೆ.
ರಸ್ತೆಯ ದುಃಸ್ಥಿತಿ ಮಾತ್ರವಲ್ಲದೇ ಇಂಥ ಕಾರ್ಯ ಮಾಡುವ ಸಮಯದಲ್ಲಿ ಉಂಟಾಗುವ ಭ್ರಷ್ಟಾಚಾರವನ್ನೂ ಆಕೆ ಬಹಿರಂಗಪಡಿಸಿದ್ದಾಳೆ. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆಯೇ ಜಿಲ್ಲಾಡಳಿತ ಎಚ್ಚೆತ್ತುಕೊಂಡಿದೆ.
ನಾವು ಇಲ್ಲಿ ತೆರಿಗೆ ಪಾವತಿಸುತ್ತೇವೆ. ಆದರೆ ಸಾರ್ವಜನಿಕ ಸೌಕರ್ಯಗಳು ಮಾತ್ರ ಸರಿಯಾಗಿ ಸಿಗುತ್ತಿಲ್ಲ. ಇದರಿಂದ ನೊಂದು ಈ ಕೆಲಸ ಮಾಡಿರುವುದಾಗಿ ಸುಹಾನಿ ತಿಳಿಸಿದ್ದಾಳೆ. ರಸ್ತೆ ರಿಪೇರಿ ಮಾಡುವಂತೆ ಗ್ರಾಮಸ್ಥರು ಪ್ರತಿಭಟನೆ ನಡೆಸಿದಾಗ ಅವರಿಗೆ ಬೆದರಿಕೆ ಹಾಕಲಾಗಿತ್ತು ಎಂದೂ ವಿಡಿಯೋದಲ್ಲಿ ಬಾಲಕಿ ತಿಳಿಸಿದ್ದಾಳೆ.
ಒಟ್ಟಿನಲ್ಲಿ ಇದೀಗ ಆಡಳಿತ ಎಚ್ಚೆತ್ತುಕೊಂಡು, ದಿಢೀರ್ ರಸ್ತೆ ರಿಪೇರಿಗೆ ಮುಂದಾಗಿದೆ.