ಕೋವಿಡ್​ಮುಕ್ತ ಈ ಗ್ರಾಮದಲ್ಲಿ 87 ರೂಪಾಯಿಗೆ ಸಿಗುತ್ತೆ ಮನೆ!

italy-house
Published on

ಕಲಾಬ್ರೀಯಾ (ಇಟಲಿ): ಈ ಶೀರ್ಷಿಕೆ ನೋಡಿ ಎಲ್ಲೋ ತಪ್ಪಾಗಿದೆ ಎಂದುಕೊಂಡ್ರಾ? ಎಲ್ಲೂ ತಪ್ಪಾಗಿಲ್ಲ. 87 ಲಕ್ಷವೂ ಅಲ್ಲ, 87 ಸಾವಿರವೂ ಅಲ್ಲ... ನಿಜವಾಗಿಯೂ ಈ ಗ್ರಾಮದಲ್ಲಿ ಕೇವಲ 87 ರೂಪಾಯಿಗೆ ಮನೆ ಸಿಗುತ್ತೆ!

ಆದರೆ ಇಂಥದ್ದೊಂದು ಗ್ರಾಮದಲ್ಲಿ ಮನೆ ಖರೀದಿಗೆ ಹೋಗಬೇಕಿರುವುದು ಇಟಲಿಗೆ. ಇಟಲಿಯ ಕಲಬ್ರಿಯಾ ಪ್ರಾಂತ್ಯದ ಪುಟ್ಟ ಗ್ರಾಮ ವೆಸಾಜ್ಜಾ ಎಂಬಲ್ಲಿ ಮನೆಗಳು ಮಾರಾಟಕ್ಕಿದ್ದು, 1 ಯೂರೋ ಅಂದರೆ ಸರಿಸುಮಾರು 87 ರೂಪಾಯಿ ಬೆಲೆ ನಿಗದಿ ಮಾಡಲಾಗಿದೆ. ಈ ಗ್ರಾಮ ಸಲೇಮಿ ಸಿಸಿಲಿ ದ್ವೀಪದ ಸಮೀಪವಿದೆ.

ಕರೊನಾ ವೈರಸ್​ ಹಾಟ್​ಸ್ಪಾಟ್​ಗಳಲ್ಲಿ ಇಟಲಿ ಕೂಡ ಒಂದು. ಅದರಲ್ಲಿಯೂ ಆರಂಭಿಕ ದಿನಗಳಲ್ಲಿ ಇಟಲಿ ಅಕ್ಷರಶಃ ಈ ವೈರಸ್​ನಿಂದಾಗಿ ನಲುಗಿ ಹೋಗಿತ್ತು. ಇಲ್ಲಿಯ ಪ್ರತಿಯೊಂದು ಗ್ರಾಮಕ್ಕೂ ವೈರಸ್​ ಹರಡಿತ್ತು. ಆದರೆ ವೆಸಾಜ್ಜಾದಲ್ಲಿ ಮಾತ್ರ ಯಾವುದೇ ವೈರಸ್​ ಪತ್ತೆಯಾಗದ್ದೇ ಇರುವುದು ಇದರ ಹೆಗ್ಗಳಿಕೆ. ಗ್ರಾಮಸ್ಥರು ಕರೊನಾ ನಿಯಮಗಳನ್ನು ಪಾಲಿಸುವುದರ ಜತೆಗೆ, ಹೊರ ಜಗತ್ತಿನ ಸಂಪರ್ಕವನ್ನೇ ಈ ವೇಳೆ ಕಡಿದುಕೊಂಡಿರುವ ಕಾರಣ, ಸದ್ಯ ಗ್ರಾಮವೀಗ ಕೋವಿಡ್​ಮುಕ್ತವಾಗಿದೆ.

ಲಾಕ್​ಡೌನ್​ ಹಿನ್ನೆಲೆಯಲ್ಲಿ ಅನೇಕ ಮಂದಿ ಕೆಲಸ ಕಳೆದುಕೊಂಡಿರುವ ಕಾರಣ, ಮನೆ ಬಾಡಿಗೆ ಕೊಡುವುದೂ ಕಷ್ಟವಾಗಿದೆ. ಅಂಥವರಿಗಾಗಿ ‘ಆಪರೇಷನ್ ಬ್ಯೂಟಿ’ ಎಂಬ ಹೆಸರಿನಲ್ಲಿ ಈ ಗ್ರಾಮದಲ್ಲಿ ಮನೆಗಳನ್ನು ನೀಡಲು ನಿರ್ಧರಿಸಲಾಗಿದೆಯಂತೆ.

ಸಲೇಮಿ ಸಿಸಿಲಿ ದ್ವೀಪ ಐತಿಹಾಸಿಕ ಸ್ಥಳದ ಜತೆಗೆ ದ್ರಾಕ್ಷಿ ಹಾಗೂ ಆಲಿವ್​ ತೋಟಗಳಿಂದ ಆವೃತವಾಗಿದೆ. ಇಲ್ಲಿ ಅತ್ಯಂತ ಕಡಿಮೆ ಜನಸಂಖ್ಯೆಯಿಂದ ಜೀವನ ನಿರ್ವಹಣೆ ಮಾಡಲಾಗದೇ, ಇತ್ತ ಆಸ್ತಿ ಮಾರಾಟ ಮಾಡಲೂ ಆಗದೇ ಜನತೆ ಕಷ್ಟದಲ್ಲಿದ್ದಾರೆ. ಆದ್ದರಿಂದ ಇಲ್ಲಿ ಮನೆಗಳನ್ನು ಕೊಂಡುಕೊಳ್ಳುವವರಿಗೆ ಬರ ಬಿದ್ದಿತ್ತು. ಆದರೆ ಇದೀಗ ಕರೊನಾವೈರಸ್​ ಹಾಗೂ ಲಾಕ್​ಡೌನ್​ ಹಿನ್ನೆಲೆಯಲ್ಲಿ ಕಡಿಮೆ ಬೆಲೆಯ ಮನೆಯ ಆಸೆಗೆ ಜನರು ಬರುತ್ತಿರುವುದಾಗಿ ವರದಿಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net