ಪ್ರಧಾನಿಯ 'ಲೆಟರ್ಸ್​ ಟು ಸೆಲ್ಫ್' ಕವನ ಸಂಕಲನ ಶೀಘ್ರ ಮಾರುಕಟ್ಟೆಗೆ: ಗುಜರಾತಿಯಿಂದ ಅನುವಾದವಾದ ಕೃತಿ

modi
Published on

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಬರೆದಿರುವ ಗುಜರಾತಿ ಕವನ ಸಂಕಲನದ ಇಂಗ್ಲಿಷ್ ಆವೃತ್ತಿ 'ಲೆಟರ್ಸ್​ ಟು ಸೆಲ್ಫ್' ಆಗಸ್ಟ್‌ನಲ್ಲಿ ಲೋಕಾರ್ಪಣೆಗೊಳ್ಳಲಿದೆ.

2007ರಲ್ಲಿ ಪ್ರಕಟವಾಗಿದ್ದ ಮೂಲ ಕೃತಿ `ಆಂಖ್ ಕಾ ಧನ್ಯ ಛೇ’ ಕವನ ಸಂಕಲನ ಇಂಗ್ಲಿಷ್‍ಗೆ ಅನುವಾದಗೊಂಡಿದ್ದು ಆಗಸ್ಟ್‌ನಲ್ಲಿ ಮಾರುಕಟ್ಟೆಗೆ ಬರಲಿದೆ. ಗುಜರಾತಿ ಭಾಷೆಯಿಂದ ಈ ಕವನಗಳನ್ನು ಪತ್ರಕರ್ತೆ ಹಾಗೂ ಇತಿಹಾಸ ತಜ್ಞೆ ಭಾವನಾ ಸೋಮಾಯಾ ಇಂಗ್ಲಿಷ್‍ಗೆ ಅನುವಾದಿಸಿದ್ದಾರೆ.

`ಲೆಟರ್ ಟು ಸೆಲ್ಫ್’ ಕವನದ ಇಂಗ್ಲಿಷ್ ಅನುವಾದವನ್ನು ಫಿಂಗರ್‌ಪ್ರಿಂಟ್ ಪಬ್ಲಿಷಿಂಗ್ ಸಂಸ್ಥೆ ಹೊರ ತರುತ್ತಿದೆ.

ಪ್ರಾಕೃತಿಕ ಸೌಂದರ್ಯದಿಂದ ಹಿಡಿದು ಬದುಕಿನ ಒತ್ತಡಗಳ ಬಿಂಬಿಸುವ ಆಂಖ್ ಆ ಧನ್ಯ ಮತ್ತಿತರ ಹಲವು ಚಿತ್ತಾಕರ್ಷಕ ಕವನಗಳು ಗಾಢ ವಿಮರ್ಶೆ, ಚಿಂತನೆಯಿಂದ ಸಂಪನ್ನಗೊಂಡಿರುವುದಾಗಿ ಭಾವನಾ ಹೇಳಿದ್ದಾರೆ. ಇದರ ಜತೆಗೆ ಪ್ರಗತಿ, ಹತಾಶೆ, ಅನ್ವೇಷಣೆ, ಧೈರ್ಯ ಹಾಗೂ ಸಹಾನುಭೂತಿಯಂಥಹ ವಿಷಯಗಳು ಕವನದಲ್ಲಿದ್ದು, ಮೋದಿ ಅವರ ಭಾವನೆಗಳ ಮಂಥನವನ್ನು ಹಿಡಿದಿಡಲಾಗಿದೆ ಎಂದಿದ್ದಾರೆ.

ಈ ಕೃತಿ ಕವನ ಪ್ರಿಯರಿಗೆ ಇಷ್ಟವಾಗುತ್ತವೆ. ಅನುವಾದವೂ ಅದ್ಭುತವಾಗಿದೆ ಎಂದು ಫಿಂಗರ್‌ಪ್ರಿಂಟ್ ಪಬ್ಲಿಷಿಂಗ್‍ನ ಕಾರ್ಯನಿರ್ವಾಹಕ ಪ್ರಕಾಶಕ ಶಂತನು ದತ್ತಗುಪ್ಪಾ ಹೇಳಿದ್ದಾರೆ. ಕವನಗಳು ಛಂದಸ್ಸುಗಳಿಂದ ತುಂಬಿದ್ದು, ಅತ್ಯಂತ ಪ್ರಾಸಬದ್ಧವಾಗಿವೆ. ಪ್ರಕೃತಿ ಬಗ್ಗೆ ಅಥವಾ ಜೀವನದ ಹಲವು ಜಂಜಾಟ ಕುರಿತು ತಮ್ಮ ಚಿಂತನೆ, ಕನಸುಗಳು ಮತ್ತು ಕಳವಳ ಇತ್ಯಾದಿಗಳನ್ನು ಮೋದಿ ಕವನಗಳ ಮುಖೇನ ಜಗತ್ತಿನ ಜತೆ ಪ್ರಧಾನಿ ಹಂಚಿಕೊಂಡಿದ್ದಾರೆ ಎಂದು ಶಂತನು ಬಣ್ಣಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net