

ವಾಷಿಂಗ್ಟನ್: ಅಮೆರಿಕ ಕ್ಯಾಪಿಟಲ್ ಹಿಲ್ ಕಟ್ಟಡದಲ್ಲಿ ಜನವರಿ 6ರಂದು ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಯುಎಸ್ ಸೆನೆಟ್ ಖುಲಾಸೆಗೊಳಿಸಿದೆ.
ಈ ಹಿನ್ನೆಲೆಯಲ್ಲಿ ಮಾರಣಾಂತಿಕ ಹಿಂಸಾಚಾರಕ್ಕೆ ಪ್ರಚೋದನೆ ಆರೋಪದ ಮೇರೆಗೆ ಟ್ರಂಪ್ ಅವರನ್ನು ಹೊಣೆಗಾರನ್ನಾಗಿ ಮಾಡುವ ಡೆಮಾಕ್ರಟಿಕ್ ಪ್ರಯತ್ನ ಇಲ್ಲಿಗೆ ಮುಗಿದಂತಾಗಿದೆ. ಎರಡನೇ ವಾಗ್ದಂಡನೆ ವಿಚಾರಣೆಯಲ್ಲಿ ಬಹುತೇಕ ರಿಪಬ್ಲಿಕನ್ ಸೆನೆಟ್ ಸದಸ್ಯರು ಟ್ರಂಪ್ ಅವರನ್ನು ಶಿಕ್ಷಿಸಲು ನಿರಾಕರಿಸಿದರು. ಇದರಿಂದ ಆರೋಪಮುಕ್ತಗೊಳಿಸಲಾಗಿದೆ.
ಅಧಿಕಾರ ಪಡೆಯುವ ಕೊನೆಯ ಪ್ರಯತ್ನವಾಗಿ ಕಾಂಗ್ರೆಸ್ ಮೇಲೆ ದಾಳಿ ನಡೆಸುವಂತೆ ಬೆಂಬಲಿಗರಿಗೆ ಆದೇಶಿಸುವ ಮೂಲಕ ಟ್ರಂಪ್ ತಾವು ಸ್ವೀಕರಿಸಿದ ಪ್ರಮಾಣ ವಚನಕ್ಕೆ ದ್ರೋಹ ಎಸಗಿದ್ದಾರೆ ಎಂದು ಐದು ದಿನಗಳ ವಿಚಾರಣೆಯಲ್ಲಿ ಡೆಮಾಕ್ರಟಿಕ್ ಅಭಿಯೋಜಕರು ಸಮರ್ಥಿಸಿದರು. ಅಮೆರಿಕದ 100 ಸದಸ್ಯರ ಸೆನೆಟ್, ಟ್ರಂಪ್ ಅವರನ್ನು 57-43 ಮತಗಳಿಂದ ವಾಗ್ದಂಡನೆ ಮಾಡಲು ಮತ ಚಲಾಯಿಸಿದರು. ವಾಗ್ದಂಡನೆ ನಿರ್ಣಯ ಮಂಡಿಸಲು ಬೇಕಾದ ಮೂರನೇ ಎರಡರಷ್ಟರಲ್ಲಿ 10 ಮತಗಳ ಅಭಾವ ಕಂಡುಬಂದಿತ್ತು.
ಜನವರಿ 6ರಂದು ದಂಗೆಯೆದ್ದಿದ್ದ ಟ್ರಂಪ್ ಬೆಂಬಲಿಗರು ಅಮೆರಿಕ ಕ್ಯಾಪಿಟಲ್ ಹಿಲ್ ಕಟ್ಟಡಕ್ಕೆ ಮುತ್ತಿಗೆ ಹಾಕಿ ಹಿಂಸಾಚಾರ ನಡೆಸಿತ್ತು. ಡೊನಾಲ್ಡ್ ಟ್ರಂಪ್ ಅವರ ಮೇಲೆ ಹಿಂಸಾಚಾರವನ್ನು ಪ್ರಚೋದಿಸಿದ ಆರೋಪವನ್ನು ಹೊರಿಸಲಾಗಿತ್ತು.
ಎರಡು ಬಾರಿ ವಾಗ್ದಂಡನೆ ಎದುರಿಸುತ್ತಿರುವ ಮೊದಲ ಅಧ್ಯಕ್ಷ ಹಾಗೂ ಅಧ್ಯಕ್ಷ ಹುದ್ದೆ ತ್ಯಜಿಸಿದ ಬಳಿಕವೂ ವಾಗ್ದಂಡನೆ ಎದುರಿಸುತ್ತಿರುವ ಮೊದಲ ಅಮೆರಿಕ ಅಧ್ಯಕ್ಷ ಎಂಬ ಅಪಖ್ಯಾತಿಗೆ ಡೊನಾಲ್ಡ್ ಟ್ರಂಪ್ ಒಳಗಾಗಿದ್ದಾರೆ. ವಾಗ್ದಂಡನೆಯಿಂದ ಖುಲಾಸೆಗೊಂಡ ಬಳಿಕ ಪ್ರತಿಕ್ರಿಯೆ ನೀಡಿರುವ ಡೊನಾಲ್ಡ್ ಟ್ರಂಪ್, ಆಂದೋಲನ ಇದೀಗಷ್ಟೇ ಪ್ರಾರಂಭವಾಗಿದೆ ಎಂದು ಹೇಳಿಕೆ ನೀಡಿದ್ದಾರೆ.