ಭಾರತಕ್ಕೆ ಮಸಿಬಳಿಯಲು ಗುಟ್ಟಾಗಿ ತಯಾರಿಸಿದ್ದ ‘ಟೂಲ್‌ಕಿಟ್‌’ ವಿವಾದ: ಗ್ರೇಟಾಳಿಂದ ಸಿಕ್ಕಿಬಿದ್ದ ದಿಶಾ ಅರೆಸ್ಟ್‌

disha
Published on

ನವದೆಹಲಿ: ರೈತರ ಪ್ರತಿಭಟನೆಯನ್ನು ಮುಂದಿಟ್ಟುಕೊಂಡು ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತಕ್ಕೆ ಕಪ್ಪುಮಸಿ ಬಳಿಯುವುದು ಹೇಗೆ? ಭಾರತದ ಹೆಸರಿಗೆ ಕಳಂಕ ತರುವುದು ಹೇಗೆ ಎಂದೆಲ್ಲಾ ಯೋಜನೆ ರೂಪಿಸಿದ ಟೂಕ್‌ಕಿಟ್‌ ಸದ್ಯ ಭಾರಿ ಸುದ್ದಿ ಮಾಡಿದೆ. ಸಾಮಾಜಿಕ ಕಾರ್ಯಕರ್ತೆ ಎಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿರುವ ಗ್ರೇಟಾ ಥನ್‌ಬರ್ಗ್‌ ಈ ಟೂಲ್‌ಕಿಟ್‌ ಪೋಸ್ಟ್‌ ಮಾಡಿ ನಂತರ ಡಿಲೀಟ್‌ ಮಾಡಿದ್ದರೂ ಇದರಿಂದ ಅನೇಕ ಕರಾಳ ಮುಖಗಳು ಬಹಿರಂಗಗೊಂಡಿವೆ.

ಗಣರಾಜ್ಯೋತ್ಸವ ದಿನದಂದು ದೆಹಲಿಯಲ್ಲಿ ರೈತರ ಹೆಸರಿನಲ್ಲಿ ನಡೆದ ಹಿಂಸಾಚಾರದ ಬೆನ್ನಲ್ಲೇ ಈ ಭಯಾನಕ ಟೂಲ್‌ಕಿಟ್‌ ಟ್ವೀಟ್‌ ಮಾಡಿ ಗ್ರೇಟಾ ಥನ್‌ಬರ್ಗ್‌ ಸಿಕ್ಕಿಬಿದ್ದಿದ್ದಳು. ಹಿಂಸಾಚಾರ ಹೇಗೆ ಆರಂಭಿಸಬೇಕು, ಯಾವ್ಯಾವ ಕಡೆಗಳಲ್ಲಿ ಪ್ರತಿಭಟನೆ ಮಾಡಬೇಕು ಎಂಬೆಲ್ಲಾ ಅಂಶಗಳನ್ನು ಹೊಂದಿದ್ದ ಈ ರಹಸ್ಯಮಯ ಈ ದಾಖಲೆ ಗ್ರೇಟಾಳಿಗೆ ಹೇಗೆ ಸಿಕ್ಕಿತ್ತೋ ತಿಳಿಯದು. ಒಟ್ಟಿನಲ್ಲಿ ಆಕೆ ಶೇರ್‌ ಮಾಡಿಕೊಂಡು ಪೇಚಿಗೆ ಸಿಲುಕಿದ್ದಳು.

ನಂತರ ಟೂಲ್‌ಕಿಟ್‌ ವಿರುದ್ಧ ದೂರು ದಾಖಲಾಗಿತ್ತು. ಇದೀಗ ಗ್ರೇಟಾಳಿಂದಾಗಿ ಸಾಮಾಜಿಕ ಕಾರ್ಯಕರ್ತೆ ಎನಿಸಿಕೊಂಡಿರುವ 21 ವರ್ಷದ ದಿಶಾ ರವಿ ಸಿಕ್ಕಿಬಿದ್ದಿದ್ದಾಳೆ. ಈಕೆ ಕೂಡ ಗ್ರೇಟಾಳಂತೆಯೇ ಪರಿಸರವಾದಿ! ಈಕೆಯನ್ನು ಬೆಂಗಳೂರಿನಲ್ಲಿ ದೆಹಲಿ ಪೊಲೀಸರು ಬಂಧಿಸಿದ್ದಾರೆ. ದೆಹಲಿ ರೈತರ ಪ್ರತಿಭಟನೆಯ ವೇಳೆ ಹಿಂಸೆಗೆ ಪ್ರಚೋದನೆ ನೀಡಿದ ಆರೋಪ ಈಕೆಯ ಮೇಲಿದೆ. ಬೆಂಗಳೂರಿನ ಸೋಲದೇವನಹಳ್ಳಿಯಲ್ಲಿ ಇಂದು ಬಂಧಿಸಲಾಗಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಅವರು ಪ್ರಚೋದನಾ ವಿಡಿಯೋ ಪೋಸ್ಟ್ ಮಾಡಿದ್ದಳು. ದೆಹಲಿಯಲ್ಲಿ ಗಣರಾಜ್ಯೋತ್ಸವ ದಿನ ರೈತರ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿತ್ತು. ಈ ನಡುವೆಯೇ ಗ್ರೇಟಾ ಥನ್ ಬರ್ಗ್ ಟೂಲ್‌ಕಿಟ್ ಬಹಿರಂಗಗೊಂಡಿತ್ತು. ಇದರಿಂದ ದಿಶಾ ರವಿ ಕೂಡ ಹಿಂಸಾಚಾರದ ಹಿಂದೆ ಇರುವ ಆರೋಪ ಹೊತ್ತಿದ್ದಾಳೆ. ಟೂಲ್‌ಕಿಟ್‌ ಹಿಂದೆ ಈಕೆಯ ಕೈವಾಡ ಇರುವುದು ಮೇಲ್ನೋಟಕ್ಕೆ ಕಂಡುಬಂದಿದ್ದರಿಂದ ಆಕೆಗಾಗಿ ಪೊಲೀಸರು ಶೋಧ ಕಾರ್ಯ ನಡೆಸಿದ್ದರು. ಇದೀಗ ಸಿಕ್ಕಿಬಿದ್ದಿರುವುದಾಗಿ ಪೊಲೀಸರು ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net