ಮೃತರ ಅಂಗಾಂಗ ದಾನ ಇನ್ನು ಕಡ್ಡಾಯ: ಶೀಘ್ರ ಮಸೂದೆ ಮಂಡನೆ

human organ
Published on

ನವದೆಹಲಿ: ಭಾರತದಲ್ಲಿ ಅಂಗಾಗ ದಾನ ಮಾಡುವವರ ಕೊರತೆ ಇದೆ. ಜತೆಗೆ ಅಂಗಾಗಗಳ ಬೇಡಿಕೆ ಮತ್ತು ಪೂರಕೆಯಲ್ಲೂ ತುಂಬಾ ಅಂತರವಿದೆ. ಈ ಹಿನ್ನೆಲೆಯಲ್ಲಿ ಅಂಗಾಂಗ ದಾನಗಳ ಕುರಿತು ಖಾಸಗಿ ಮಸೂದೆಗೆ ಬಿಜೆಪಿ ಸಂಸದ ವರುಣ್ ಗಾಂಧಿ ಮುಂದಾಗಿದ್ದಾರೆ.

ಈ ಕುರಿತು ಮಾಹಿತಿ ನೀಡಿರುವ ಅವರು, ಯುವ ಜನರಲ್ಲಿ ಅಂಗಾಂಗ ದಾನವನ್ನು ಉತ್ತೇಜಿಸುವುದಕ್ಕಾಗಿ ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ಸಂಸದರ ಖಾಸಗಿ ಮಸೂದೆಯೊಂದನ್ನು ಮಂಡಿಸುವುದಾಗಿ ಮಾಹಿತಿ ನೀಡಿದ್ದಾರೆ.

ಪ್ರತಿ ವರ್ಷ 2 ಲಕ್ಷ ಮೂತ್ರಪಿಂಡಗಳು, 50 ಸಾವಿರ ಹೃದಯಗಳು ಮತ್ತು 50 ಸಾವಿರ ಲಿವರ್‌ಗಳು ಕಸಿಗಾಗಿ ಬೇಕಾಗಿವೆ. ಆದರೆ ಇವು ಸಿಗದೇ ಹಲವಾರು ರೋಗಿಗಳು ಮೃತಪಡುತ್ತಿರುವ ಪ್ರಕರಣ ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ಮೃತರ ಅಂಗಾಂಗಗಳನ್ನು ದಾನ ಮಾಡುವುದು ಇಂದಿನ ಅಗತ್ಯವಾಗಿದೆ ಎಂದು ಅವರು ಹೇಳಿದ್ದಾರೆ.

ಮಾನವ ಅಂಗಾಂಗ ದಾನ ಮತ್ತು ಕಸಿ ಮಸೂದೆ-2020ಯನ್ನು (Donation and Transplantation of Human Organ Bill, 2020') ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ಮಂಡಿಸಲಾಗುವುದು. ವ್ಯಕ್ತಿ ಸತ್ತ ನಂತರ ಅಂಗಾಗ ದಾನ ಮಾಡುವುದನ್ನು ಕಡ್ಡಾಯಗೊಳಿಸಲಿದೆ ಎಂಬ ಮಾಹಿತಿಯನ್ನು ವರುಣ್‌ ಗಾಂಧಿ ನೀಡಿದ್ದಾರೆ.

#OrganDonationDay ಹ್ಯಾಷ್‌ಟ್ಯಾಗ್ ಮೂಲಕ ಟ್ವೀಟ್ ಮಾಡಿರುವ ವರುಣ್‌ ಗಾಂಧಿಯವರು, ದೇಶದಲ್ಲಿರುವ ಎಲ್ಲ ನಾಗರಿಕರು ಅಂಗಾಗ ದಾನಕ್ಕೆ ಸ್ವಯಂ ಪ್ರೇರಿತವಾಗಿ ನೋಂದಣಿ ಮಾಡಿಸಿಕೊಳ್ಳುವುದನ್ನು ಉತ್ತೇಜಿಸಲು ಈ ಖಾಸಗಿ ಮಸೂದೆಯನ್ನು ಮಂಡಿಸುತ್ತಿದ್ದೇನೆ. ಇದರಿಂದ ಅಂಗಾಗ ಕೊರತೆಯಿಂದ ಮೃತರಾಗುತ್ತಿರುವವರ ಸಂಖ್ಯೆಯನ್ನು ಕಡಿಮೆ ಮಾಡಲು ಸಾಧ್ಯವಿದೆ ಎಂದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net