ಕಲ್ಲಿದ್ದಲು ಹಗರಣ: ಕೇಂದ್ರದ ಮಾಜಿ ಸಚಿವನಿಗೆ ಮೂರು ವರ್ಷ ಜೈಲು

dileep ray
Published on

ರಾಂಚಿ: 1999ರ ಜಾರ್ಖಂಡ್​ನಲ್ಲಿ ನಡೆದಿದ್ದ ಕಲ್ಲಿದ್ದಲು ಹಗರಣ ಪ್ರಕರಣದಲ್ಲಿ ಕೇಂದ್ರದ ಮಾಜಿ ಸಚಿವ ದಿಲೀಪ್ ರೇ ಅವರಿಗೆ ವಿಶೇಷ ನ್ಯಾಯಾಲಯವು ಮೂರು ವರ್ಷಗಳ ಜೈಲುಶಿಕ್ಷೆಯನ್ನು ವಿಧಿಸಿದೆ.

ಆರೋಪ ಸಾಬೀತಾಗಿದ್ದ ಹಿನ್ನೆಲೆಯಲ್ಲಿ ಕಳೆದ ವಾರ ಕೋರ್ಟ್​ ಇವರನ್ನು ಅಪರಾಧಿ ಎಂದು ಘೋಷಿಸಿತ್ತು. ಆದರೆ ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸಿರಲಿಲ್ಲ. ಇಂದು ಶಿಕ್ಷೆಯ ಪ್ರಮಾಣ ಪ್ರಕಟಿಸಲಾಗಿದ್ದು, ಮೂರು ವರ್ಷ ಶಿಕ್ಷೆ ವಿಧಿಸಲಾಗಿದೆ.

ಕಲ್ಲಿದ್ದಲು ಬ್ಲಾಕ್ ಹಂಚಿಕೆಯಲ್ಲಿನ ಅಕ್ರಮಗಳಿಗೆ ಸಂಬಂಧಿಸಿದಂತೆ ಈ ಆದೇಶ ಹೊರಬಿದ್ದಿದೆ. ಅಟಲ್ ಬಿಹಾರಿ ವಾಜಪೇಯಿಯವರ ಸರ್ಕಾರದಲ್ಲಿ ರೇ ಅವರು ಕಲ್ಲಿದ್ದಲು ಇಲಾಖೆಯ ರಾಜ್ಯ ಸಚಿವರಾಗಿದ್ದರು.

ದಿಲೀಪ್​ ರೇ ಜತೆ ಕಲ್ಲಿದ್ದಲು ಸಚಿವಾಲಯದ ಇಬ್ಬರು ಹಿರಿಯ ಅಧಿಕಾರಿಗಳಾದ ಪ್ರದೀಪ್ ಕುಮಾರ್ ಬ್ಯಾನರ್ಜಿ ಮತ್ತು ನಿತ್ಯಾನಂದ್ ಗೌತಮ್, ಕ್ಯಾಸ್ಟ್ರಾನ್ ಟೆಕ್ನಾಲಜೀಸ್ ಲಿಮಿಟೆಡ್ (ಸಿಟಿಎಲ್)ನ ನಿರ್ದೇಶಕ ಮಹೇಂದ್ರ ಕುಮಾರ್ ಅಗರ್​ವಾಲ್​ ಅವರಿಗೂ ಮೂರು ವರ್ಷ ಶಿಕ್ಷೆ ವಿಧಿಸಲಾಗಿದೆ.

ಜಾರ್ಖಂಡ್‌ನ ಗಿರಿದಿಹ್​ನಲ್ಲಿರುವ ಬ್ರಹ್ಮದಿಹಾ ಕಲ್ಲಿದ್ದಲು ಬ್ಲಾಕ್ ಅನ್ನು 1999ರಲ್ಲಿ ಕ್ಯಾಸ್ಟ್ರಾನ್ ಟೆಕ್ನಾಲಜೀಸ್ ಲಿಮಿಟೆಡ್​ಗೆ ಅಕ್ರಮವಾಗಿ ಹಂಚಿಕೆ ಮಾಡಿರುವ ಪ್ರಕರಣ ಇದಾಗಿದೆ. ಜಾರ್ಖಂಡ್ ಕಲ್ಲಿದ್ದಲು ಗಣಿ ಮತ್ತು ನಿಕ್ಷೇಪಗಳ ಹಂಚಿಕೆಗೆ ಸಂಬಂಧಿಸಿದಂತೆ ಭಾರೀ ಪ್ರಮಾಣದ ಅಕ್ರಮ ಮತ್ತು ಅವ್ಯವಹಾರ ನಡೆದಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net