

ಹೈದರಾಬಾದ್: ದುರಂತಮಯ ಪ್ರಸಿದ್ಧ ಪ್ರೇಮ ಕಥೆಗಳು ಇದಾಗಲೇ ಸಾಕಷ್ಟು ಪ್ರಚಾರದಲ್ಲಿ ಇವೆ. ಅಂಥದ್ದೇ ಒಂದು ನೋವಿನ ಪ್ರೀತಿಯ ಘಟನೆ ತೆಲಂಗಾಣದಲ್ಲಿ ನಡೆದಿದೆ.
ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸಿದ್ದ ಪ್ರಿಯತಮೆ ಮೃತಪಟ್ಟ ನಂತರ, ಆಕೆಯಿಲ್ಲದ ಜೀವನವನ್ನು ಅರಗಿಸಿಕೊಳ್ಳಲಾಗದ ಪ್ರಿಯತಮನೊಬ್ಬ ಆಕೆಯ ಸಮಾಧಿ ಬಳಿಯೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ತೆಲಂಗಾಣದ ಜಯಶಂಕರ್ ಭೂಪಾಲಪಲ್ಲಿ ಜಿಲ್ಲೆಯ ಮಹದೇವಪುರ ಮಂಡಲದ ಕುದುರುಪಲ್ಲಿಯಲ್ಲಿ ನಡೆದಿದೆ. 24 ವರ್ಷದ ಚೆಲ್ಲಾ ಮಹೇಶ್ ಆತ್ಮಹತ್ಯೆ ಮಾಡಿಕೊಂಡಿರುವ ಯುವಕ. ತೆಲಂಗಾಣ ರಾಜ್ಯ ಖನಿಜ ಅಭಿವೃದ್ಧಿ ನಿಗಮದಲ್ಲಿ ಕೆಲಸ ಮಾಡುತ್ತಿದ್ದ ಮಹೇಶ್ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದ.
ಆದರೆ ಹುಡುಗಿ ಇತ್ತೀಚೆಗೆ ಅನಾರೋಗ್ಯದಿಂದ ಮೃತಪಟ್ಟಿದ್ದಳು. ಆಕೆಯ ಸಾವಿನ ನಂತರ ಮಹೇಶ್ ಖಿನ್ನತೆಗೆ ಜಾರಿದ್ದ. ಆಕೆಯಿಲ್ಲದ ಮೇಲೆ ತಾನು ಬದುಕಿದ್ದು ಪ್ರಯೋಜನವಿಲ್ಲ ಎಂದು ನಿರ್ಧರಿಸಿಬಿಟ್ಟಿದ್ದಾನೆ. ಇದೇ ಕಾರಣಕ್ಕೆ ಯುವತಿಯ ಸಮಾಧಿ ಬಳಿ ಆಗಮಿಸಿದ ಮಹೇಶ್, ಅಲ್ಲಿಯೇ ಸಮೀಪ ಇರುವ ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಪ್ರೀತಿಸಿದ ಹುಡುಗಿ ಇಲ್ಲದೆ ಬದುಕಲು ಸಾಧ್ಯವಿಲ್ಲವೆಂದು ತನ್ನ ವಾಟ್ಸ್ಆ್ಯಪ್ ಸ್ಟೇಟಸ್ನಲ್ಲಿಯೂ ಹಾಕಿಕೊಂಡಿದ್ದಾನೆ. ಇದು ನಂತರ ಬೆಳಕಿಗೆ ಬಂದಿದೆ. ದಸರಾ ಹಬ್ಬದ ಸಡಗರದಲ್ಲಿದ್ದ ಮಹೇಶ್ ಕುಟುಂಬಸ್ಥರಿಗೆ ಆತನ ಸಾವಿನ ಸುದ್ದಿ ತಿಳಿದಿದೆ. ಯುವತಿಯನ್ನು ಮಹೇಶ್ ತುಂಬಾ ಪ್ರೀತಿಸುತ್ತಿದ್ದ, ಮದುವೆಗೂ ಅರೇಂಜ್ ಮಾಡಿಕೊಂಡಿದ್ದ. ಆಕೆಯ ಸಾವಿನ ನಂತರ ತುಂಬಾ ನೊಂದುಕೊಂಡು ಖಿನ್ನತೆಗೆ ಜಾರಿದ್ದ ಎಂದು ಕುಟುಂಬದವರು ಹೇಳಿದ್ದಾರೆ.