

ನವದೆಹಲಿ: ಗಾಂಜಾ ಹಾಗೂ ಗಾಂಜಾ ಅಂಟು ಇನ್ನು ಮುಂದೆ ಭಾರತ ಸೇರಿದಂತೆ ಕೆಲವು ರಾಷ್ಟ್ರಗಳಲ್ಲಿ ಅಪಾಯಕಾರಿ ಮಾದಕ ವಸ್ತುವಲ್ಲ. ಏಕೆಂದರೆ ಇವುಗಳನ್ನು ಅಪಾಯಕಾರಿ ಮಾದಕ ವಸ್ತುಗಳ ಪಟ್ಟಿಯಿಂದ ಹೊರಗಿಡುವ ಸಂಬಂಧ ವಿಶ್ವಸಂಸ್ಥೆ ತೆಗೆದುಕೊಂಡಿರುವ ನಿರ್ಧಾರಕ್ಕೆ ಭಾರತವೂ ಸಮ್ಮತಿ ನೀಡಿದೆ.
ಇದೇ 2ರಿಂದ 4ರವರೆಗೆ ನಡೆದಿರುವ ಅಧಿವೇಶನದಲ್ಲಿ ವಿಶ್ವಸಂಸ್ಥೆಯು ಈ ನಿರ್ಣಯವನ್ನು ಮಂಡಿಸಿದೆ. ಮಾದಕ ದ್ರವ್ಯ ವಸ್ತುಗಳಿಗೆ ಸಂಬಂಧಿಸಿದ ಆಯೋಗದ ಅಧಿವೇಶನ ಇದಾಗಿತ್ತು. 1961ರ ಒಪ್ಪಂದದ 4ನೇ ಅನುಚ್ಛೇದದಡಿ ಹೆರಾಯಿನ್ನಂತಹ ಅಪಾಯಕಾರಿ ಮಾದಕ ವಸ್ತುಗಳ ಪಟ್ಟಿಯಲ್ಲಿ ಗಾಂಜಾ ಇತ್ತು. ಈ ಪಟ್ಟಿಯಿಂದ ಗಾಂಜಾವನ್ನು ಹೊರಗಿಡಲು 53 ಸದಸ್ಯ ರಾಷ್ಟ್ರಗಳು ಮತದಾನ ಪ್ರಕ್ರಿಯೆಯಲ್ಲಿ ಭಾಗಿಯಾಗಿದ್ದವು.
ಈ ಅಧಿವೇಶನದಲ್ಲಿ ಭಾರತ, ಅಮೆರಿಕ, ಯುರೋಪ್ ಒಕ್ಕೂಟದ ಬಹುತೇಕ ದೇಶಗಳು ಸೇರಿದಂತೆ 27 ರಾಷ್ಟ್ರಗಳು ವಿಶ್ವಸಂಸ್ಥೆಯ ನಿರ್ಣಯ ಸರಿಯಾಗಿದೆ ಎಂದು ಅದರ ಪರವಾಗಿ ಮತ ಹಾಕಿದ್ದರೆ, ಪಾಕಿಸ್ತಾನ, ಚೀನಾ, ರಷ್ಯಾ ಸೇರಿದಂತೆ 25 ರಾಷ್ಟ್ರಗಳು ಇದಕ್ಕೆ ಸಮ್ಮತಿ ನೀಡಲಿಲ್ಲ. ಉಕ್ರೇನ್ ಅತ್ತವೂ ಇಲ್ಲದೇ, ಇತ್ತವೂ ಇಲ್ಲದೇ ತಟಸ್ಥವಾಗಿ ನಿಂತಿದೆ.
ಆದರೆ ಇಲ್ಲಿಯವರೆಗೆ ಇದ್ದ ಸಮಸ್ಯೆ ಎಂದರೆ ಗಾಂಜಾವನ್ನು ಅಪಾಯಕಾರಿ ಮಾದಕ ವಸ್ತುಗಳ ಪಟ್ಟಿಯಲ್ಲಿ ಇಟ್ಟಿದ್ದರಿಂದ ಅವುಗಳನ್ನು ಔಷಧಿ ಹಾಗೂ ಚಿಕಿತ್ಸೆಗೆ ಬಳಸಲು ಸಾಧ್ಯವಾಗಿರಲಿಲ್ಲ. ಇದರಿಂದ ಸಮಸ್ಯೆಯಾಗಿತ್ತು. ಆದರೆ ಇದೀಗ ವಿಶ್ವಸಂಸ್ಥೆಯ ನಿರ್ಣಯಕ್ಕೆ ಒಪ್ಪಿಗೆ ಸೂಚಿಸಿರುವ ಭಾರತ ಸೇರಿದಂತೆ ಇತರ ರಾಷ್ಟ್ರಗಳು ಇವುಗಳನ್ನು ಬಳಕೆ ಮಾಡಬಹುದಾಗಿದೆ.
ಈಗ ದೇಶಾದ್ಯಂತ ಮಾದಕ ವಸ್ತುಗಳ ಸುದ್ದಿ ಭುಗಿಲೆದ್ದಿರುವ ಸಂದರ್ಭದಲ್ಲಿ ಇಂಥದ್ದೊಂದು ನಿರ್ಣಯ ಅಂಗೀಕಾರ ಆಗಿರುವುದು ಹಲವಾರು ಪ್ರಶ್ನೆಗಳನ್ನು ಏಳಿಸಿದೆ. ಆದರೆ ಈ ಕುರಿತು ಸ್ಪಷ್ಟನೆ ನೀಡಿರುವ ಹಿರಿಯ ಅಧಿಕಾರಿಗಳು, ಹೆರಾಯಿನ್ ಬೇರೆ, ಗಾಂಜಾ ಬೇರೆ. ಹೆರಾಯಿನ್ ಇರುವ ಪಟ್ಟಿಯಲ್ಲಿ ಗಾಂಜಾವನ್ನು ಸೇರಿಸಿದ್ದು ತಪ್ಪು. ಗಾಂಜಾವನ್ನು ಸೇವಿಸಿ ಸಮಸ್ಯೆಯಾಗಿರುವವ ಸಂಖ್ಯೆ ಕಮ್ಮಿ. ಆದರೆ ಈಗ ಸದ್ಯ ಇರುವ ಬೃಹತ್ ಜಾಲದಲ್ಲಿ ಹೆರಾಯಿನ್ ಅಕ್ರಮವೇ ಹೆಚ್ಚಾಗಿದೆ. ಅಫೀಮು ಸೇವನೆಯಿಂದ ಹೆಚ್ಚಿನ ಸಮಸ್ಯೆಯಾಗುತ್ತದೆ. ಆದ್ದರಿಂದ ಅದಕ್ಕೂ ಇದಕ್ಕೂ ಹೋಲಿಕೆ ಮಾಡುವುದು ಸರಿಯಲ್ಲ ಎಂದಿದ್ದಾರೆ.
ಸದ್ಯ ಭಾರತದಲ್ಲಿರುವ ಕಾನೂನಿನ ಪ್ರಕಾರ ಪ್ರಕಾರ ಗಾಂಜಾ ಉತ್ಪಾದನೆ, ಮಾರಾಟ, ಖರೀದಿ, ವಶದದಲ್ಲಿ ಇಟ್ಟುಕೊಳ್ಳುವುದು ಶಿಕ್ಷಾರ್ಹ ಅಪರಾಧವಾಗಿದೆ. ಆರೋಪ ಸಾಬೀತಾದರೆ 6 ತಿಂಗಳು ಜೈಲು ಮತ್ತು ಗರಿಷ್ಟ 10 ಸಾವಿರ ರೂ. ದಂಡ ವಿಧಿಸಬಹುದಾಗಿದೆ. 1985ರಲ್ಲಿ ಜಾರಿಯಾಗಿರುವ ಮಾದಕ ವಸ್ತುಗಳು ಹಾಗೂ ಅಮಲು ಪದಾರ್ಥಗಳ ನಿಯಂತ್ರಣ ಕಾಯ್ದೆ (ಎನ್ಡಿಪಿಎಸ್) ಕಾಯ್ದೆ ಇದಾಗಿದೆ. ಇದಕ್ಕೀಗ ತಿದ್ದುಪಡಿ ತರುವ ನಿರೀಕ್ಷೆ ಇದೆ ಎಂದು ಹೇಳಲಾಗುತ್ತಿದೆ.