ಬಸ್ ಒಳಗೆ ಆಡುತ್ತಿದ್ದ ಬಾಲಕಿಯ ರೇಪ್​ ಮಾಡಿ ಗೋಣಿ ಚೀಲದಲ್ಲಿ ತುಂಬಿಟ್ಟ ಚಾಲಕ!

rape
Published on

ಮುಂಬೈ: ಐಷಾರಾಮಿ ಬಸ್ ಚಾಲಕನೊಬ್ಬ 4 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ಗೋಣಿ ಚೀಲದೊಳಗೆ ತುಂಬಿಸಿ ಮುಂಬೈ-ಅಹಮದಾಬಾದ್ ಹೆದ್ದಾರಿಯ ವಾಲೀವ್ ಬಳಿ ಪೆಟ್ರೋಲ್ ಪಂಪ್ ಬಳಿ ಎಸೆದಿರುವ ಭಯಾನಕ ಘಟನೆ ನಡೆದಿದೆ.

ಭಯಂದರ್​ನ ಭೋಲಾರಂ ಕೊಳೆಗೇರಿ ಬಳಿ ನಿಲ್ಲಿಸಿದ್ದ ಐಷಾರಾಮಿ ಬಸ್ ಒಳಗೆ ಬಾಲಕಿ ಆಟವಾಡುತ್ತಿದ್ದಳು. ಈಕೆಯ ಜತೆಗೆ ಇತರ ಮಕ್ಕಳೂ ಆಟವಾಡುತ್ತಿದ್ದರು. ಇದೇ ವೇಳೆ ಚಾಲಕ ಬಂದಾಗ ಉಳಿದ ಮಕ್ಕಳು ಬಸ್​ನಿಂದ ಇಳಿದಿದ್ದಾರೆ. ಆದರೆ ಬಾಲಕಿ ಮಾತ್ರ ಇಳಿಯಲು ಆಗದೇ ಒಳಗೇ ಉಳಿದುಬಿಟ್ಟಿದ್ದಾಳೆ.

ಬಸ್ಸು ಚಲಿಸಲು ಶುರುವಾದ ಮೇಲೆ ಬಾಲಕಿ ಚೀರಿಕೊಂಡಿದ್ದಾಳೆ. ಆಗಲೇ ಚಾಲಕನಿಗೆ ಆಕೆ ಬಸ್ಸಿನಲ್ಲಿ ಇರುವುದು ತಿಳಿದಿದೆ. ಆತ ಆಕೆಯನ್ನು ನಿರ್ಜನ ಪ್ರದೇಶಕ್ಕೆ ಕೊಂಡೊಯ್ದಿದ್ದಾನೆ. ನಂತರ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ.

ಹುಡುಗಿ ಪ್ರಜ್ಞೆ ಕಳೆದುಕೊಂಡಿದ್ದಾಳೆ. ಅದೇ ವೇಳೆ ಚಾಲಕ ಆಕೆಯ ಕತ್ತು ಹಿಸುಕಿದ್ದಾನೆ. ಅವಳು ಸತ್ತಳೆಂದು ತಿಳಿದು ಗೋಣಿಚೀಲ ಒಂದರಲ್ಲಿ ಅವಳನ್ನು ತುಂಬಿ ಎಸೆದು ಹೋಗಿದ್ದಾನೆ.

ಗೋಣಿಚೀಲದೊಳಗೆ ಇದ್ದ ಬಾಲಕಿಗೆ ಪ್ರಜ್ಞೆ ಬಂದಾಗ ಅಲ್ಲಾಡಲು ಶುರು ಮಾಡಿದ್ದಾಳೆ. ಸ್ಥಳೀಯರು ಗೋಣಿಚೀಲ ಅಲ್ಲಾಡುವುದನ್ನು ನೋಡಿ ಹೆದರಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಚೀಲವನ್ನು ತೆರೆದಾಗ ಬಾಲಕಿ ಇರುವುದು ಕಾಣಿಸಿದೆ.

ಆಕೆಯಿನ್ನೂ ಉಸಿರಾಡುತ್ತಿದ್ದುದರಿಂದ ಕೂಡಲೇ ಆಸ್ಪತ್ರೆಗೆ ಸಾಗಿಸಿದ್ದಾರೆ. ಅಷ್ಟರಲ್ಲಿಯೇ ತನ್ನ ಮಗಳು ಕಾಣೆಯಾಗಿರುವುದಾಗಿ ತಾಯಿ ಪೊಲೀಸರಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸರು ಹತ್ತಿರದ ಪ್ರದೇಶಗಳ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಘಟನೆ ಬೆಳಕಿಗೆ ಬಂದಿದೆ.

ಚಾಲಕನನ್ನು ಬಂಧಿಸಲಾಗಿದ್ದು, ಭಾರತೀಯ ದಂಡ ಸಂಹಿತೆ (ಐಪಿಸಿ) ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೊಕ್ಸೊ) ಕಾಯ್ದೆಯ ಸಂಬಂಧಿತ ವಿಭಾಗಗಳ ಅಡಿಯಲ್ಲಿ ಆತನ ವಿರುದ್ಧ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದ್ದು, ಆತನನ್ನು ಬಂಧಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net