ಕೃಷಿ ಕಾನೂನು ವಿರೋಧಿಸಿ ಮಾಜಿ ಸಿಎಂ ಸೇರಿದಂತೆ ಇಬ್ಬರಿಂದ ಪದ್ಮ ವಿಭೂಷಣ ವಾಪಸ್​!

padmavibhooshan
Published on

ನವದೆಹಲಿ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ನೂತನ ಕೃಷಿ ಕಾನೂನನ್ನು ವಿರೋಧಿಸಿ ಇದಾಗಲೇ ಭಾರಿ ಪ್ರತಿಭಟನೆ ನಡೆಯುತ್ತಿದೆ. ಸಹಸ್ರಾರು ಸಂಖ್ಯೆಯಲ್ಲಿ ರೈತರು ಪ್ರತಿಭಟನೆ ನಡೆಸುತ್ತಿದ್ದು, ಇದು ಉಗ್ರ ಸ್ವರೂಪ ತಾಳಿದೆ.

ಈ ನಡುವೆಯೇ, ಕೇಂದ್ರದ ಮಾಜಿ ಸಚಿವ, ಮೂರು ಬಾರಿ ಪಂಜಾಬ್​ ಮುಖ್ಯಮಂತ್ರಿಯಾಗಿದ್ದ ಹಾಗೂ ಅಕಾಲಿ ದಳದ ಪ್ರಮುಖ ಪ್ರಕಾಶ್ ಸಿಂಗ್ ಬಾದಲ್ ಹಾಗೂ ರಾಜ್ಯಸಭೆಯ ಬಂಡಾಯ ಸದಸ್ಯ ಸುಖದೇವ್​ ಸಿಂಗ್​ ಧಿಂಡ್ಸಾ ಅವರು ಪದ್ಮವಿಭೂಷಣ ಪ್ರಶಸ್ತಿಯನ್ನು ವಾಪಸ್ ನೀಡಿದ್ದಾರೆ. 'ಭಾರತ ಸರ್ಕಾರ ರೈತರಿಗೆ ದ್ರೋಹ ಬಗೆದಿದೆ' ಎಂದು ಹೇಳಿರುವ ಈ ಇಬ್ಬರೂ ಪ್ರಶಸ್ತಿ ಪುರಸ್ಕೃತರು ಇಂಥ ಗೌರವ ನಮಗೆ ಬೇಡ ಎಂದು ಹೇಳಿದ್ದಾರೆ.

ಈ ಕುರಿತು ರಾಷ್ಟ್ರಪತಿ ರಾಮನಾಥ್​ ಕೋವಿಂದ್​ ಅವರಿಗೆ ಪತ್ರ ಬರೆದಿರುವ ಪ್ರಕಾಶ್​ ಸಿಂಗ್​ ಬಾದಲ್​ ಅವರು, ಶಾಂತಿಯುತವಾಗಿ ರೈತರು ಪ್ರತಿಭಟನೆ ನಡೆಸಲು ಕೇಂದ್ರ ಸರ್ಕಾರ ಅವಕಾಶ ನೀಡದೇ ಇರುವುದು ನನಗೆ ಆಘಾತವಾಗಿದೆ. ರೈತರನ್ನು ತಿರಸ್ಕಾರದಿಂದ ಕಾಣಲಾಗುತ್ತಿದೆ. ಆದ್ದರಿಂದ ನಾನು ಪ್ರಶಸ್ತಿಯನ್ನು ವಾಪಸ್​ ಮಾಡುತ್ತಿರುವುದಾಗಿ ಅವರು ಹೇಳಿದ್ದಾರೆ.

ಧಿಂಡ್ಸಾ ಅವರಿಗೆ ಕಳೆದ ವರ್ಷ ರಾಷ್ಟ್ರಪತಿಗಳು ಈ ಪ್ರಶಸ್ತಿ ನೀಡಿದ್ದರು. ಅವರು ಕೂಡ ಕೇಂದ್ರದ ವಿರುದ್ಧ ಸಿಡಿದೆದ್ದಿದ್ದಾರೆ. ಬಿಜೆಪಿ ನೇತೃತ್ವದ ಸರಕಾರ ತಂದಿರುವ ಕೃಷಿ ಮಾರುಕಟ್ಟೆ ಕುರಿತ ಕಾನೂನುಗಳು ಈಗಾಗಲೇ ರೈತರಿಗೆ ಮಾರಕವಾಗಿವೆ ಎಂದು ಅವರು ಹೇಳಿದ್ದಾರೆ.

ಇವರ ನಡೆಯನ್ನು ಕಾಂಗ್ರೆಸ್​ ಶ್ಲಾಘಿಸಿದ್ದು, ಒಳ್ಳೆಯ ನಿರ್ಧಾರ ಎಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net