ಸ್ವಿಮ್ಮಿಂಗ್​​ ಮಾಡ್ತಿದ್ದ ವ್ಯಕ್ತಿಯ ಮೇಲೆ ದಾಳಿ ಮಾಡಿ ನೀರೊಳಗೆ ಎಳೆದೊಯ್ದ ಶಾರ್ಕ್​! ವಿಡಿಯೋ ವೈರಲ್​

Shark Attack
Published on

ಕೈರೋ: ಸಮುದ್ರ ದಂಡೆಯ ಸಮೀಪ ಸ್ವಿಮ್ಮಿಂಗ್​​ ಮಾಡುತ್ತಾ ವಿಹರಿಸುತ್ತಿದ್ದ ರಷ್ಯಾ ಮೂಲದ ವ್ಯಕ್ತಿಯ ಮೇಲೆ ಶಾರ್ಕ್​ ಒಂದು ದಾಳಿ ನಡೆಸಿ ಕೊಂದಿರುವ ಭಯಾನಕ ಘಟನೆ ಈಜಿಪ್ಟ್​​ನಲ್ಲಿ ನಡೆದಿದೆ. ಘಟನೆ ಸಂಬಂಧಿಸಿದ ಭೀಕರ ದೃಶ್ಯ ಮೊಬೈಲ್​ನಲ್ಲಿ ರೆಕಾರ್ಡ್​ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಈಜಿಪ್ಟ್​ನ ಹುರ್ಘಾಡ ನಗರದಲ್ಲಿರುವ ರೆಡ್​ ಸೀ ರೆಸಾರ್ಟ್​ನಲ್ಲಿ ಈ ಘಟನೆ ಗುರುವಾರ ನಡೆದಿದೆ. ಪ್ರವಾಸಿಗನ ಮೇಲೆ ದಾಳಿ ಮಾಡಿದ್ದು ಟೈಗರ್​ ಶಾರ್ಕ್​ ಎಂದು ಈಜಿಪ್ಟ್​​ನ ಪರಿಸರ ಸಚಿವಾಲಯ ತಿಳಿಸಿದೆ. ಈ ಘಟನೆಯ ಬೆನ್ನಲ್ಲೇ ಅಧಿಕಾರಿಗಳು ಕರಾವಳಿಯ 74 ಕಿಲೋಮೀಟರ್ ವ್ಯಾಪ್ತಿಯನ್ನು ನಿಷೇಧಿಸಿದ್ದು, ಭಾನುವಾರದವರೆಗೆ ಜಲಕ್ರೀಡೆ ಹಾಗೂ ಚಟುವಟಿಕೆಗಳಿಗೆ ನಿರ್ಬಂಧ ಹೇರಿದ್ದಾರೆ. ಆದರೆ, ಮೃತನ ಮಾಹಿತಿ ಬಗ್ಗೆ ಅಲ್ಲಿನ ಸರ್ಕಾರ ಯಾವುದೇ ಮಾಹಿತಿಯನ್ನು ನೀಡಿಲ್ಲ.

ವಿಡಿಯೋದಲ್ಲಿ ಏನಿದೆ?

ಶಾರ್ಕ್​ ದಾಳಿಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದೆ. ತನ್ನನ್ನು ಸುತ್ತುವರಿದ ಶಾರ್ಕ್​ನಿಂದ ತಪ್ಪಿಸಿಕೊಳ್ಳಲು ರಷ್ಯಾ ವ್ಯಕ್ತಿ ಭಯದಿಂದ ಸಮುದ್ರದಲ್ಲಿ ಈಜಲು ಪರದಾಡುತ್ತಿರುವ ದೃಶ್ಯ ವಿಡಿಯೋದಲ್ಲಿದೆ. ಎರಡ್ಮೂರು ಬಾರಿ ದಾಳಿ ಮಾಡಿ, ಆತನ ಸುತ್ತಲೂ ಸುತ್ತುವ ಶಾರ್ಕ್​, ಅಂತಿಮವಾಗಿ ವ್ಯಕ್ತಿಯನ್ನು ನೀರಿನ ಒಳಗೆ ಎಳೆದೊಯ್ಯುತ್ತದೆ. ಓರ್ವ ಲೈಫ್​ಗಾರ್ಡ್​ ಸಹಾಯಕ್ಕಾಗಿ ಕೂಗಿಕೊಂಡರು ಆತನನ್ನು ರಕ್ಷಿಸಲು ಆತನ ಬಳಿಗೆ ಹೋಗುವಷ್ಟರಲ್ಲಿ ಶಾರ್ಕ್​ ಆತನನ್ನು ಎಳೆದುಕೊಂಡು ಹೋಗಿತ್ತು.

ದಾಳಿಯ ಕೆಲವು ಗಂಟೆಗಳ ಬಳಿಕ ಈಜಿಪ್ಟ್​ ಪರಿಸರ ಸಚಿವಾಲಯದ ಅಧಿಕಾರಿಗಳು ಶಾರ್ಕ್​ ಅನ್ನು ಹಿಡಿದು, ದಾಳಿಗೆ ಕಾರಣ ಏನು ಎಂಬುದನ್ನು ಖಚಿತಪಡಿಸಿಕೊಳ್ಳಲು ಪರಿಶೀಲಿಸುತ್ತಿದ್ದಾರೆ. ಹುರ್ಘಾಡದಲ್ಲಿರುವ ರಷ್ಯಾದ ರಾಯಭಾರ ಕಚೇರಿಯು ಮೃತ ವ್ಯಕ್ತಿಯು ರಷ್ಯಾ ಮೂಲದವನು ಎಂದು ಪತ್ತೆಹಚ್ಚಿದೆ. ಆದರೆ, ಆತನ ಹೆಸರು ಸೇರಿದಂತೆ ಹೆಚ್ಚಿನ ಮಾಹಿತಿಯನ್ನು ನೀಡಿಲ್ಲ. ರಷ್ಯಾ ವ್ಯಕ್ತಿ 1999ರಲ್ಲಿ ಜನಿಸಿದವನಾಗಿದ್ದು, ಈಜಿಪ್ಟ್​ನಲ್ಲೇ ಪೂರ್ಣ ಸಮಯದಿಂದ ವಾಸವಿದ್ದ ಎಂದು ತಿಳಿಸಿದೆ.

ರಷ್ಯಾದ ಪ್ರವಾಸಿಗರು ನೀರಿನಲ್ಲಿದ್ದಾಗ ಜಾಗರೂಕರಾಗಿರಬೇಕು ಮತ್ತು ಸ್ಥಳೀಯ ಅಧಿಕಾರಿಗಳು ವಿಧಿಸಿರುವ ಯಾವುದೇ ಈಜು ನಿಷೇಧಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ರಷ್ಯಾ ರಾಯಭಾರ ಕಚೇರಿ ಎಚ್ಚರಿಸಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net