

ಉತ್ತರಪ್ರದೇಶ: ಕೌಶಂಬಿ ಜಿಲ್ಲೆಯಲ್ಲಿ ಮದುವೆಯೊಂದರಲ್ಲು ವಧು, ವರನ ಮೈಬಣ್ಣ ತುಂಬಾ ಕಪ್ಪಾಗಿದೆ ಎಂದು ಹೇಳಿ ಮದುವೆಯಾಗಲು ನಿರಾಕರಿಸಿರುವ ಘಟನೆ ನಡೆದಿದೆ.
ಈ ವಿವಾಹವನ್ನು ಮೇ 29 ರಂದು ಶೇರ್ಪುರ್ ನಿವಾಸಿ ಯುವಕನೊಂದಿಗೆ ನಿಶ್ಚಯಿಸಲಾಗಿತ್ತು. ನಿಗದಿತ ದಿನದಂದು ವರನು ಅದ್ಧೂರಿಯಾಗಿ ಮದುವೆಯ ಮೆರವಣಿಗೆಯಲ್ಲಿ ಹುಡುಗಿಯ ಮನೆಗೆ ಬಂದಿದ್ದಾನೆ. ವಧು ಮದುವೆಯ ಮಂಟಪಕ್ಕೆ ಬರುವವರೆಗೆ ಎಲ್ಲವೂ ಸರಿಯಾಗಿಯೇ ಇತ್ತು. ವಧು ವರನ ಕೊರಳಿಗೆ ಹಾರ ಹಾಕಲು ನಿರಾಕರಿಸಿದಳು.
ವಧುವಿನ ನಿರಾಕರಣೆ ಆಕೆಯ ಕುಟುಂಬ ಸೇರಿದಂತೆ ಎಲ್ಲರಿಗೂ ಆಘಾತವನ್ನುಂಟು ಮಾಡಿದೆ. ವಧುವಿನ ನಿರ್ಧಾರದ ಬಗ್ಗೆ ಪ್ರಶ್ನಿಸಿದಾಗ, ಅವಳು ಕಪ್ಪು ಚರ್ಮದ ಯುವಕನನ್ನು ಮದುವೆಯಾಗಲು ಇಷ್ಟವಿಲ್ಲ. ಅವನಿಗೆ ಹೆಚ್ಚು ವಯಸ್ಸಾಗಿದೆ ಎಂದೂ ಹೇಳಿದ್ದಾಳೆ.
ಮದುವೆಗೆ ವಧುವಿನ ನಿರಾಕರಣೆ ಮಾಡಿದ್ದು, ಎರಡು ಕುಟುಂಬಸ್ಥರಲ್ಲಿ ಬೇಸರ ಉಂಟು ಮಾಡಿದೆ. ಈ ಮೊದಲು ಆಕೆ ವರನನ್ನು ನೋಡಿರಲಿಲ್ವಾ ಎಂದು ಕೆಲವರು ಪ್ರಶ್ನೆ ಮಾಡಿದ್ದಾರೆ. ಆಕೆಯ ನಿರ್ಧಾರವನ್ನು ಬದಲಾಯಿಸುವಂತೆ ಆಕೆಯ ಕುಟುಂಬ ಸದಸ್ಯರು ಮನವೊಲಿಸಲು ಪ್ರಯತ್ನಿಸಿದರು, ಆದರೆ ಅವಳು ತನ್ನ ನಿರ್ಧಾರವನ್ನು ಬದಲಾಯಿಸಲಿಲ್ಲ. ವರನು ತನ್ನ ಮದುವೆಯನ್ನು ಮುರಿದುಕೊಂಡು ಹೋಗಿದ್ದಾನೆ.