

ಬಿಹಾರ: ಬಿಹಾರದಲ್ಲಿ ಮಹಾಘಟಬಂದನ್ ಅಧಿಕಾರಕ್ಕೆ ಬಂದರೆ ಮಹಿಳೆಯರಿಗೆ 30 ಸಾವಿರ ಆರ್ಥಿಕ ನೆರವನ್ನು ನೀಡಲಾಗುವುದು ಎಂದು ಮೈತ್ರಿಕೂಟದ ಸಿಎಂ ಅಭ್ಯರ್ಥಿ ತೇಜಸ್ವಿ ಯಾದವ್ (Tejashwi Yadav) ಮಂಗಳವಾರ (ನ.04) ಭರವಸೆ ನೀಡಿದ್ದಾರೆ.
ಬಿಹಾರ ವಿಧಾನಸಭಾ ಚುನಾವಣೆಯ ಮೊದಲ ಹಂತದ ಪ್ರಚಾರ ಅಂತಿಮ ಹಂತಕ್ಕೆ ಬಂದಿದ್ದು, ಈ ವೇಳೆ ತೇಜಸ್ವಿ ಯಾದವ್ ಪತ್ರಕಾಗೋಷ್ಟಿಯಲ್ಲಿ ಮಹತ್ವದ ಘೋಷಣೆ ಮಾಡಿದ್ದಾರೆ.
ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಮಕರ ಸಂಕ್ರಾಂತಿ ದಿನ ಮಾಯ್ ಬಹಿನ್ ಮಾನ್ ಯೋಜನೆ ಅಡಿಯಲ್ಲಿ ಮಹಿಳೆಯರ ಖಾತೆಗೆ 30 ಸಾವಿರ ರೂ.ಗಳನ್ನ ಜಮಾ ಮಾಡುತ್ತೇನೆ ಎಂದು ತೇಜಸ್ವಿ ತಿಳಿಸಿದ್ದಾರೆ. ಆರ್ಜೆಡಿ ಮತ್ತು ಕಾಂಗ್ರೆಸ್ ಜಂಟಿ ಚುನಾವಣಾ ಪ್ರಣಾಳಿಕೆಯಲ್ಲಿ ತಿಳಿಸಿರುವಂತೆ ಮೈ ಬಹಿನ್ ಮಾನ್ ಯೋಜನೆ ಅಡಿಯಲ್ಲಿ ಆರ್ಥಿಕವಾಗಿ ದುರ್ಬಲ ಹೊಂದಿದ ಹಾಗೂ ಹಿಂದುಳಿದ ಸಮುದಾಯಗಳ ಮಹಿಳೆಯರಿಗೆ ತಿಂಗಳಿಗೆ 2,500 ರೂಗಳನ್ನು ಒದಗಿಸುವ ಗುರಿಯನ್ನು ಹೊಂದಿದ್ದೇವೆ ಎಂದು ಹೇಳಿದರು.
ನಿತೀಶ್ ಕುಮಾರ್ ನೇತೃತ್ವದ ಸರ್ಕಾರವು ತನ್ನ ಉದ್ಯಮಶೀಲತೆ ಮತ್ತು ಸ್ವ-ಉದ್ಯೋಗ ಉಪಕ್ರಮದಡಿ 25 ಲಕ್ಷ ಮಹಿಳೆಯರ ಬ್ಯಾಂಕ್ ಖಾತೆಗಳಿಗೆ ತಲಾ 10 ಸಾವಿರ ರೂ.ಗಳನ್ನು ಜಮಾ ಮಾಡುವುದಾಗಿ ಘೋಷಿಸಿದ ಕೆಲ ದಿನಗಳ ಬಳಿಕ ಮಹಾಮೈತ್ರಿಕೂಟ ಈ ತಂತ್ರ ಹೆಣೆದಿದೆ.
ಮಹಾಘಟಬಂದನ್ ಪ್ರಣಾಳಿಕೆಯ ಪ್ರಮುಖ ಬದ್ಧತೆಗಳನ್ನು ಪುನರುಚ್ಚಿಸಿದ ಯಾದವ್ ತಮ್ಮ ಪಕ್ಷವು ಸರ್ಕಾರಿ ನೌಕರರಿಗೆ ಹಳೆಯ ಪಿಂಚಣಿ ಯೋಜನೆಯನ್ನು ಪುನಃ ನೀಡುವುದಾಗಿ ಹೇಳಿದರು. ಹಾಗೆಯೇ ಆರೋಗ್ಯ ಕಾರ್ಯಕರ್ತರನ್ನು ಅವರ ಊರಿನಿಂದ 70 ಕಿಮೀ ಒಳಗೆ ನಿಯೋಜಿಸಲಾಗುವುದು ಎಂದು ಭರವಸೆ ನೀಡಿದರು.
ನಾನು ಆರೋಗ್ಯ ಸಚಿವನಾಗಿದ್ದಾಗ ಇದು ದಾದಿಯರ ಬಹುಕಾಲದ ಬೇಡಿಕೆಯಾಗಿತ್ತು ಎಂದು ಹೇಳಿದ್ದಾರೆ.
ರಾಜ್ಯದ ರೈತರಿಗೆ ನೀರಾವರಿಯಾಗಿ ಉಚಿತ ವಿದ್ಯುತ್ ಮತ್ತು ಪ್ರಮುಖ ಬೆಳೆಗಳಿಗೆ ಹೆಚ್ಚಿನ ಬೆಲೆಗಳನ್ನು ನೀಡಲಾಗುತ್ತದೆ ಎಂದು ಯಾದವ್ ಭರವಸೆ ನೀಡಿದರು. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ, MSP ಜೊತೆಗೆ ಭತ್ತದ ಬೆಳೆಗಳಿಗೆ ಕ್ವಿಂಟಾಲ್‌ಗೆ 300 ರೂ. ಬೋನಸ್ ಹಾಗೂ ಗೋಧಿಗೆ ಕ್ವಿಂಟಾಲ್‌ಗೆ 400 ರೂ. ಬೋನಸ್ ನೀಡಲಾಗುವುದು ಎಂದು ಹೇಳಿದ್ದಾರೆ. (ಏಜೆನ್ಸೀಸ್)