

ಫರಿದಾಬಾದ್: ಹರಿಯಾಣದ ಫರಿದಾಬಾದ್ನಲ್ಲಿ ಸೋಮವಾರ(ನ. 03) ಸಂಜೆ 17 ವರ್ಷದ ವಿದ್ಯಾರ್ಥಿನಿ ಗ್ರಂಥಾಲಯಕ್ಕೆ ತೆರಳಿ ಮನೆಗೆ ಹಿಂತಿರುಗುತ್ತಿದ್ದಾಗ, ರಸ್ತೆಯಲ್ಲಿ ಕಾಯುತ್ತಾ ನಿಂತಿದ್ದ ಯುವಕನೊಬ್ಬ ಏಕಾಏಕಿ ಆಕೆಯ ಮೇಲೆ ಎರಡು ಸುತ್ತು ಗುಂಡು ಹಾರಿಸಿದ್ದಾನೆ(Firing). ಘಟನೆ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಸೋಮವಾರ ಸಂಜೆ 5.30ರ ಸುಮಾರಿಗೆ ಈ ಘಟನೆ ನಡೆದಿದೆ. ವಿದ್ಯಾರ್ಥಿನಿ ಮತ್ತು ಯುವಕ ಒಂದೇ ಗ್ರಂಥಾಲಯದಲ್ಲಿ ಅಭ್ಯಾಸಕ್ಕೆ ಹೋದಾಗ ಪರಿಚಯವಾಗಿದ್ದರು ಎನ್ನಲಾಗಿದೆ. ಬಳಿಕ ಯುವತಿ ಅವನಿಂದ ಅಂತರ ಕಾಯ್ದುಕೊಂಡಿದ್ದರಿಂದ ಆಕೆಯನ್ನು ಫಾಲೋ ಮಾಡಿ ರಸ್ತೆಯಲ್ಲಿಯೇ ಬರೋದನ್ನು ಕಾಯ್ದು ಬಂದ ಬಳಿಕ ಗುಂಡು ಹಾರಿಸಿ ಪರಾರಿಯಾಗಿದ್ದಾನೆ.
ವಿದ್ಯಾರ್ಥಿನಿಯ ಭುಜ ಮತ್ತು ಹೊಟ್ಟೆ ಭಾಗಕ್ಕೆ ಗುಂಡುಗಳು ತಗುಲಿದ್ದು, ತಕ್ಷಣ ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದು ಬದುಕುಳಿದಿದ್ದಾಳೆ. ಆರೋಪಿ ಈ ಮೊದಲು ಪರಿಚಿತ ಎಂದು ಪೊಲೀಸರ ಮುಂದೆ ಹೇಳಿಕೆ ನೀಡಿದ್ದಾಳೆ. ಸ್ಥಳದಲ್ಲಿ ಪೊಲೀಸರು ಗನ್ ವಶಪಡಿಸಿಕೊಂಡಿದ್ದು, ಆರೋಪಿ ಬಂಧನಕ್ಕೆ ಬಲೆ ಬೀಸಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ಪೊಲೀಸರು, ನಿನ್ನೆ ಸಂಜೆ 5.30ರ ಸುಮಾರಿಗೆ ಘಟನೆಯ ಬಗ್ಗೆ ನಮಗೆ ಮಾಹಿತಿ ಸಿಕ್ಕಿತು. ನಾವು ಸ್ಥಳಕ್ಕೆ ತಲುಪಿ ಬಾಲಕಿಯನ್ನು ಆಸ್ಪತ್ರೆಗೆ ಕರೆದೊಯ್ದೆವು. ಈಗ ಆಕೆಯ ಸ್ಥಿತಿ ಸ್ಥಿರವಾಗಿದೆ.ಆಕೆಯ ಹೇಳಿಕೆಯನ್ನು ದಾಖಲಿಸಿಕೊಳ್ಳಲಾಗಿದ್ದು, ಎಫ್ಐಆರ್ ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ. (ಏಜೆನ್ಸೀಸ್)