ಹುಂಜ ಕೂಗಿದ್ದಕ್ಕೆ ₹14 ಸಾವಿರ ದಂಡ ಹಾಕಿದ ಪೊಲೀಸರು- ಕಾರಣ ವಿಚಿತ್ರ!

rooster
Published on

ಲೊಂಬಾರ್ಡಿ (ಇಟಲಿ): 2-3 ದಶಕಗಳ ಹಿಂದೆ ತುಂಬಾ ಜನಪ್ರಿಯವಾಗಿದ್ದ ಮಲೆನಾಡಿನ ಮೂಲೆನಾಗೆ... ತನ್‌ ಹುಂಜ ಕೂಗಿದ್ರೆನೇ ಬೆಳಗಾಗ್ತೆಂದು.... ಅನ್ನೋ ಹಾಡು ಕೇಳಿರಬೇಕಲ್ಲವೆ? ತನ್ನ ಹುಂಜ ಕೂಗಿದ್ರೆ ಮಾತ್ರ ಬೆಳಗಾಗುತ್ತದೆ ಎಂದು ಅಂದುಕೊಂಡಿದ್ದ ಅಜ್ಜಿಯೊಬ್ಬಳ ಗರ್ವ ಮುರಿದುಹೋಗಿರುವ ಕುರಿತಾದ ಬಲು ಪ್ರಸಿದ್ಧ ಗೀತೆಯಿದು.

ಆದರೆ ಇಲ್ಲೊಂದು ಪ್ರಕರಣದಲ್ಲಿ, ಪಾಪ ಆಸಾಮಿಯೊಬ್ಬ ತನ್ನ ಹುಂಜ ಕೂಗಿದ್ರೆ ಬೆಳಗಾಗ್ತದೆ ಎನ್ನದಿದ್ದರೂ ಹುಂಜ ಬೆಳ್ಳಂಬೆಳಗ್ಗೆ ಕೂಗಿ ನಿದ್ದೆ ಹಾಳು ಮಾಡುತ್ತದೆ ಎಂದು ದಂಡ ಹಾಕಿಸಿಕೊಂಡಿರುವ ವಿಚಿತ್ರ ಘಟನೆ ನಡೆದಿದೆ.

ಇಂಥದ್ದೊಂದು ಘಟನೆ ನಡೆದಿರುವುದು ಇಟಲಿಯ ಲೋಂಬಾರ್ಡಿ ಪಟ್ಟಣವಾದ ಕೆಸ್ಟಿರಾಗಾ ವಿದರ್ಡೊ ಎಂಬಲ್ಲಿ. ಹುಂಜ ಕೂಗಿದ್ದಕ್ಕೆ ದಂಡ ತೆತ್ತ ವ್ಯಕ್ತಿಯ ಹೆಸರು ಏಂಜೇಲೊ ಬೋಲೆಟ್ಟಿ.

ಅಷ್ಟಕ್ಕೂ ಆಗಿರುವುದು ಏನೆಂದರೆ, 83 ವರ್ಷದ ಏಂಜೇಲೊ ತಮ್ಮ ಮನೆಯಲ್ಲಿ ಹುಂಜ ಸಾಗಿದ್ದರು. ಇದು ಸಾಮಾನ್ಯವಾಗಿ ಎಲ್ಲ ಹುಂಜಗಳಂತೆ ನಸುಕಿನ 4:30-5 ಗಂಟೆಗೆ ಕೂಗುತ್ತಿತ್ತು. ಗಡಿಯಾರ ಇಲ್ಲದ ಕಾಲದಲ್ಲಿ ಹುಂಜ ಕೂಗಿದ್ದನ್ನು ಕೇಳಿಯೇ ಜನರು ಎದ್ದೇಳುತ್ತಿದ್ದುದು ಉಂಟು.

‌ಆದರೆ ಹುಂಜ ನಸುಕಿನಲ್ಲಿ ಕೂಗುವುದನ್ನು ನೆರೆಮನೆಯ ಕೆಲವರಿಗೆ ಸಹಿಸಲು ಸಾಧ್ಯವಾಗಲಿಲ್ಲ. ಸೂರ್ಯ ಏಳುವ ಮೊದಲೇ ಕೂಗಿ ಇದು ತಮ್ಮ ನಿದ್ದೆ ಹಾಳು ಮಾಡುತ್ತಿದೆ ಎಂದು ಇವರು ಸದಾ ಗೊಣಗುತ್ತಿದ್ದರು. ಅವರು ಅನೇಕ ಬಾರಿ ಏಂಜೇಲೊ ಅವರಿಗೆ ಕಂಪ್ಲೇಂಟ್‌ ಮಾಡಿದ್ದೂ ಉಂಟು.

ಆದರೆ ಹುಂಜದ ಬಾಯನ್ನು ಕಟ್ಟಿ ಇಡಲು ಸಾಧ್ಯವೆ? ಅವರಿಗೆ ಏನು ಮಾಡುವುದು ಗೊತ್ತಾಗಲಿಲ್ಲ, ಹುಂಜ ಕೂಗುವುದು ನಿಲ್ಲಿಸಲಿಲ್ಲ. ಇದರಿಂದ ಸಿಟ್ಟುಕೊಂಡಿದ್ದ ನೆರೆಹೊರೆಯಲು ಪೊಲೀಸರಿಗೆ ದೂರು ದಾಖಲು ಮಾಡಿದ್ದರು, ಹುಂಜ ಕಿರಿಕಿರಿ ಮಾಡುತ್ತದೆ ಎಂದು ದೂರಿದ್ದರು.

ಇದನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು ಏಂಜೇಲೋ ಅವರಿಗೆ 166 ಯುರೋ ಅಂದರೆ ಸುಮಾರು 14,700 ಸಾವಿರ ರೂಪಾಯಿ ದಂಡ ವಿಧಿಸಿದ್ದಾರೆ.

ದಂಡವನ್ನು ವೃದ್ಧನೇನೋ ಕಟ್ಟಿದ ಎನ್ನಿ. ಆದರೆ ಹುಂಜದ ಗತಿ ಏನಾಯಿತು ಗೊತ್ತಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net