

ಅಹಮದಬಾದ್: ಟೀಂ ಇಂಡಿಯಾದ ನಾಯಕ ರೋಹಿತ್ ಶರ್ಮಾ ಏಕದಿನ ವಿಶ್ವಕಪ್ನಲ್ಲಿ ತಮ್ಮ ಬಿರುಸಿನ ಬ್ಯಾಟಿಂಗ್ ಮುಂದುವರೆಸಿದ್ದು, ಪಾಕಿಸ್ತಾನದ ವಿರುದ್ಧವೂ ಲೀಲಾಜಾಲವಾಗಿ ಬ್ಯಾಟ್ ಬೀಸಿದ್ದಾರೆ. ಇತ್ತ ಪಾಕಿಸ್ತಾನದ ವಿರುದ್ಧದ ಪಂದ್ಯದಲ್ಲಿ ಹೊಸ ದಾಖಲೆಯನ್ನು ಸಹ ಅವರು ಬರೆದಿದ್ದಾರೆ.
ಏಕದಿನ ಕ್ರಿಕೆಟ್ ಮಾದರಿಯಲ್ಲಿ 300 ಸಿಕ್ಸರ್ ಸಿಡಿಸಿದ ಭಾರತದ ಮೊದಲ ಹಾಗೂ ವಿಶ್ವದ ಮೂರನೇ ಬ್ಯಾಟ್ಸ್ಮನ್ ಎಂಬ ಹೆಗ್ಗಳಿಕೆಗೆ ಹಿಟ್ಮ್ಯಾನ್ ರೋಹಿತ್ ಶರ್ಮಾ ಭಾಜನರಾಗಿದ್ದಾರೆ.
ಅಫ್ಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ 5 ಸಿಕ್ಸರ್ ಸಿಡಿಸುವ ಮೂಲಕ ಅಂತರಾಷ್ಟ್ರೀಯ ಕ್ರಿಕೆಟ್ನಲ್ಲಿ ಗಳಿಸಿದ ಒಟ್ಟು ಸಿಕ್ಸರ್ಗಳ ಸಂಖ್ಯೆಯನ್ನು 556ಕ್ಕೆ ಏರಿಸಿಕೊಂಡಿದ್ದರು. ಪಾಕ್ ವಿರುದ್ಧದ ಪಂದ್ಯದಲ್ಲೂ ಅವರ ಸಿಕ್ಸರ್ ಯಾತ್ರೆ ಮುಂದುರೆವದಿದ್ದು, ಅವರ ಬ್ಯಾಟ್ನಿಂದ ಒಟ್ಟಾರೆಯಾಗಿ 6 ಸಿಕ್ಸರ್ ಸಿಡಿದಿವೆ. ಈ ಮೂಲಕ ಏಕದಿನ ಮಾದರಿ ಒಂದರಲ್ಲೇ 300 ಸಿಕ್ಸರ್ ಸಿಡಿಸಿದ ಮೊದಲ ಭಾರತೀಯ ಹಾಗೂ ಒಟ್ಟಾರೆಯಾಗಿ ಮೂರನೇ ಆಟಗಾರ ಎನ್ನಿಸಿಕೊಂಡಿದ್ದಾರೆ.
ಪಾಕಿಸ್ತಾನದ ಶಾಹಿದ್ ಅಫ್ರಿದಿ (351), ವೆಸ್ಟ್ ಇಂಡೀಸ್ನ ಸ್ಪೋಟಕ ಬ್ಯಾಟ್ಸ್ಮನ್ ಕ್ರಿಸ್ ಗೇಲ್ (331) ಮೊದಲ ಎರಡು ಸ್ಥಾನದಲ್ಲಿ ಇರುವ ಆಟಗಾರರು. ಈಗಾಗಲೇ ಅಂತರಾಷ್ಟ್ರೀಯ ಕ್ರಿಕೆಟ್ಗೆ ಈ ಇಬ್ಬರು ಆಟಗಾರರು ನಿವೃತ್ತಿ ಘೋಷಿಸಿರುವುದರಿಂದ ರೋಹಿತ್ ಶರ್ಮಾ(302) ಇವರಿಬ್ಬರನ್ನು ಹಿಂದಿಕ್ಕುವ ಸಾಧ್ಯತೆ ಹೆಚ್ಚಿದೆ ಎಂದು ಹೇಳಲಾಗಿದೆ.