

ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆಯ ನಂತರ, ಅವರ ವ್ಯಕ್ತಿತ್ವದ ಬಗ್ಗೆ ಹಲವು ಬಾಲಿವುಡ್ ಕಲಾವಿದರು ಮಾತಾಡಿದ್ದಾರೆ. ಸುಶಾಂತ್ ಗುಣ ಎಂಥದ್ದು, ಅವರ ಇಷ್ಟ-ಕಷ್ಟಗಳೇನು ಮುಂತಾದ ಹಲವು ವಿಷಯಗಳ ಬಗ್ಗೆ ಈಗಾಗಲೇ ಮಾತಾಡಿದ್ದಾರೆ.
ಈಗ ನಟಿ ರಿಚಾ ಚಡ್ಡಾ, ಸಹ ಸುಶಾಂತ್ ಸಿಂಗ್ ಅವರನ್ನು ನೆನಪಿಸಿಕೊಂಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಸುಧೀರ್ಘ ಪತ್ರ ಬರೆದಿರುವ ಅವರು, ಸುಶಾಂತ್ ಮತ್ತು ತಮ್ಮ ಗೆಳೆತನದ ಬಗ್ಗೆ ವಿಸ್ತೃತವಾಗಿ ಬರೆದುಕೊಂಡಿದ್ದಾರೆ.
ಇದನ್ನೂ ಓದಿ: ಜೂನಿಯರ್ ರಣಬೀರ್ ಕಪೂರ್ ಸಾವು; ಕಾರಣ ಏನಿರಬಹುದು?
ತಮ್ಮ ಮತ್ತು ಸುಶಾಂತ್ ಅವರ ಗೆಳೆತನ ಒಂದು ದಶಕಕ್ಕಿಂತ ಹಳೆಯದಾದದ್ದು ಎಂದಿರುವ ಅವರು, 'ನಾನಾಗ ರಂಗಭೂಮಿಯಲ್ಲಿ ಕೆಲಸ ಮಾಡುತ್ತಿದ್ದೆ. ಸುಶಾಂತ್ ಆಗಷ್ಟೇ ಧಾರಾವಾಹಿಗಳಲ್ಲಿ ನಟಿಸುತ್ತಿದ್ದ. ನಾನು ಮುಂಬೈನ ಅಂಧೇರಿ ವೆಸ್ಟ್ನ ಒಂದು ಸಣ್ಣ ಅಪಾರ್ಟ್ಮೆಂಟ್ನಲ್ಲಿ ನನ್ನ ಸ್ನೇಹಿತೆಯ ಜತೆಗೆ ವಾಸವಿದ್ದೆ. ಸುಶಾಂತ್ ಪ್ರತಿ ದಿನ ಮನೆಯ ಹತ್ತಿರ ಬಂದು, ನನ್ನನ್ನು ರಿಹರ್ಸಲ್ಗೆ ಕರೆದೊಯ್ಯುತ್ತಿದ್ದ' ಎಂದು ರಿಚಾ ನೆನಪಿಸಿಕೊಂಡಿದ್ದಾರೆ.
ಈ ವಿಷಯವಾಗಿ ಇನ್ನಷ್ಟು ಬರೆದಿರುವ ಅವರು, 'ನನ್ನ ಹತ್ತಿರ ದುಡ್ಡಿರಲಿಲ್ಲ ಎನ್ನುವ ಕಾರಣಕ್ಕೆ ಅವನು ನನ್ನನ್ನು ಪಿಕಪ್ ಮಾಡುತ್ತಿರಲಿಲ್ಲ. ನನ್ನ ಹತ್ತಿರ ದುಡ್ಡಿತ್ತು. ಆದರೆ, ಆಟೋದಲ್ಲಿ ಹೋದರೆ ನನ್ನ ಮೇಕಪ್ ಕರಗಿ ಹೋಗುತ್ತದೆ ಎಂಬ ಭಯವಿತ್ತು. ಹಾಗಾಗಿ ಅವನು ನನ್ನನ್ನು ಪಿಕಪ್ ಮಾಡುತ್ತಿದ್ದ' ಎಂದು ಹೇಳಿದ್ದಾರೆ ರಿಚಾ.
ಇನ್ನು ಸುಶಾಂತ್ ಸಾವಿನ ನಂತರ ಎದ್ದಿರುವ ನೆಪೋಟಿಸಂನ ಕೂಗಿನ ಬಗ್ಗೆ ಮಾತನಾಡಿರುವ ಅವರು, 'ನನಗೆ ಯಾವತ್ತೂ ಸ್ಟಾರ್ ಮಕ್ಕಳ ಬಗ್ಗೆ ಬೇಸರವಿಲ್ಲ. ಹೊಸಬರಿಗೆ ಅವರದ್ದೇ ಆದ ಸಮಸ್ಯೆಗಳಿದ್ದರೆ, ಸ್ಟಾರ್ ಮಕ್ಕಳಿಗೂ ಅವರದ್ದೇ ಆದ ಸಾಕಷ್ಟು ಸಮಸ್ಯೆಗಳಿರುತ್ತವೆ. ಅವರಿಗೆ ಎಂಟ್ರಿ ಸುಲಭವಾಗಿ ಸಿಗಬಹುದು. ಆ ನಂತರ ಅವರು, ಸಹ ಬೇರೆಯವರಂತೆ ಹೋರಾಟ ಮಾಡಿಕೊಂಡೇ ಮುಂದುವರೆಯಬೇಕಾಗುತ್ತದೆ' ಎಂದು ರಿಚಾ ಅಭಿಪ್ರಾಯಪಟ್ಟಿದ್ದಾರೆ.