ಸುಶಾಂತ್​ ಆತ್ಮಹತ್ಯೆ ಪ್ರಕರಣ; ಸಿಬಿಐ ಬೇಡ್ವೇ ಬೇಡ, ಮುಂಬೈ ಪೊಲೀಸರೇ ಸಾಕು!

123
Published on

ಸುಶಾಂತ್​ ಸಿಂಗ್​ ರಜಪೂತ್​ ಆತ್ಮಹತ್ಯ ಪ್ರಕರಣ ದಿನದಿಂದ ದಿನಕ್ಕೆ ಬೇರೆ ಬೇರೆ ತಿರುವು ಪಡೆದುಕೊಳ್ಳುತ್ತಿದೆ. ಈಗಾಗಲೇ ಸುಶಾಂತ್​ ಇಲ್ಲವಾಗಿ ತಿಂಗಳ ಮೇಲಾಯಿತು. ಇಂದಿಗೂ ಅವರ ಸಾವು ಆತ್ಮಹತ್ಯೆಯೋ, ವ್ಯವಸ್ಥಿತ ಕೊಲೆಯೋ ಎಂಬ ಪ್ರಶ್ನೆ ಎಲ್ಲರನ್ನೂ ಕಾಡುತ್ತಿದೆ. ಒಂದಷ್ಟು ಬಲವಾದ ಕಾರಣಗಳು ಸಿಕ್ಕಿವೆಯಾದರೂ, ಅವುಗಳನ್ನು ಪೊಲೀಸ್​ ಇಲಾಖೆ ಹೊರಗೆಡುವುತ್ತಿಲ್ಲ ಎಂಬ ಮಾತೂ ಕೇಳಿಬರುತ್ತಿದೆ. ಮತ್ತೊಂದೆಡೆ ಸಾಕಷ್ಟು ಮಂದಿ ಈ ಪ್ರಕರಣವನ್ನು ಸಿಬಿಐಗೆ ವಹಿಸುವಂತೆಯೂ ಆಗ್ರಹಿಸಿದ್ದಾರೆ. ಆದರೆ, ಇದೀಗ ಪ್ರಕರಣವನ್ನು ಸಿಬಿಐಗೆ ನೀಡುವುದಿಲ್ಲ ಎಂದು ಮಹಾರಾಷ್ಟ್ರ ಸರ್ಕಾರ ಹೇಳಿದೆ.

ಇತ್ತೀಚೆಗಷ್ಟೇ ಬಿಹಾರದ ಎಂಪಿಯೊಬ್ಬರು ಪ್ರಕರಣವನ್ನು ಸಿಬಿಐಗೆ ಒಪ್ಪಿಸುವಂತೆ ಕೇಂದ್ರ ಗೃಹ ಇಲಾಖೆಗೆ ಪತ್ರ ಬರೆದಿದ್ದರು. ಅದೇ ರೀತಿ ಮಾಜಿ ಕೇಂದ್ರ ಸಚಿವ ಡಾ. ಸುಬ್ರಮಣಿಯನ್​ ಸ್ವಾಮಿ ಸಹ ಅದೇ ಮಾತನ್ನು ಹೇಳಿದ್ದರು. ಅದೇ ರೀತಿ ಸುಶಾಂತ್​ ಪ್ರೇಯಸಿ ರಿಯಾ ಚಕ್ರವರ್ತಿ ಸಹ ಪ್ರಕರಣವನ್ನು ಸಿಬಿಐಗೆ ನೀಡುವಂತೆ ಒತ್ತಾಯಿಸಿ ಟ್ವಿಟ್ ಮೂಲಕ ಮನವಿ ಮಾಡಿದ್ದರು.

‘ಸುಶಾಂತ್ ನಿಧನರಾಗಿ ಒಂದು ತಿಂಗಳಾಗಿದೆ. ಸುಶಾಂತ್ ಯಾಕೆ ಆತ್ಮಹತ್ಯೆ ಮಾಡಿಕೊಂಡರು, ಅವರಿಗೆ ಏನೆಲ್ಲಾ ಒತ್ತಡಗಳಿದ್ದವು ಎಂದು ತಿಳಿಯಬೇಕಿದೆ. ಅವರ ಪ್ರಕರಣವನ್ನು ಸಿಬಿಐಗೆ ಒಪ್ಪಿಸಿ ಎಂದು ಕೈ ಮುಗಿದು ಪ್ರಾರ್ಥಿಸುತ್ತೇನೆ’ ಎಂದು ಅವರು ಮನವಿ ಮಾಡಿದ್ದರು.

ಇದೀಗ ಮಹಾರಾಷ್ಟ್ರದ ಗೃಹ ಮಂತ್ರಿ ಅನಿಲ್​ ದೇಶ್​ಮುಖ್​ ಈ ಪ್ರಕರಣದ ಸಂಬಂಧ ಪ್ರತಿಕ್ರಿಯೆ ನೀಡಿದ್ದು, ಸುಶಾಂತ್​ ಆತ್ಮಹತ್ಯೆ ಪ್ರಕರಣವನ್ನು ಸಿಬಿಐಗೆ ನೀಡುವ ಅವಶ್ಯಕತೆ ಇಲ್ಲ. ಮುಂಬೈ ಪೊಲೀಸ್​ ಇಲಾಖೆ ಎಲ್ಲ ರೀತಿಯಿಂದಲೂ ತನಿಖೆ ನಡೆಸಿ ಮಾಹಿತಿ ಕಲೆಹಾಕುತ್ತಿದೆ. ಎಲ್ಲ ಕೋನಗಳಿಂದಲೂ ತನಿಖೆ ನಡೆಯುತ್ತಿದೆ. ಹಾಗಾಗಿ ಸಿಬಿಐನ ಅಗತ್ಯ ಇಲ್ಲ. ಎಂದಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net