

'ರಾಕಿಂಗ್ ಸ್ಟಾರ್' ಯಶ್ ಪಾಲಿಗೆ ನಾಳೆ ಶನಿವಾರ (ಜೂನ್ 18) ವಿಶೇಷವಾದ ದಿನ. ಈ ಸಂಬಂಧ ಅವರು ಅಭಿಮಾನಿಗಳು ಕಾಮ್ನ್ ಡಿಸ್ಪ್ಲೇ ಪಿಕ್ಚರ್ಗಳನ್ನು ಮಾಡಿಕೊಂಡು ಸಂಭ್ರಮ ಪಡುತ್ತಿದ್ದಾರೆ.
ಇಷ್ಟಕ್ಕೂ ನಾಳೆ ಅಂತಹ ವಿಶೇಷವೇನು? ಎಂಬ ಪ್ರಶ್ನೆ ಬರುವುದು ಸಹಜ. ಯಶ್ ಮೊದಲ ಬಾರಿಗೆ ಹೀರೋ ಆಗಿ ಕಾಣಿಸಿಕೊಂಡ ಮೊದಲ ಚಿತ್ರ 'ಮೊಗ್ಗಿನ ಮನಸ್ಸು' ಬಿಡುಗಡೆಯಾಗಿ ನಾಳೆಗೆ 12 ವರ್ಷಗಳಾಗುತ್ತವೆ. 2008ರ ಜುಲೈ 18ಕ್ಕೆ ಶಶಾಂಕ್ ನಿರ್ದೇಶನದ 'ಮೊಗ್ಗಿನ ಮನಸ್ಸು' ಚಿತ್ರ ಬಿಡುಗಡೆಯಾಗಿತ್ತು.
ಈ ಸಂಭ್ರಮವನ್ನು ಆಚರಿಸಲು ಯಶ್ ಅಭಿಮಾನಿಗಳು ತೀರ್ಮಾನಿಸಿದ್ದು, ಯಶ್ ವೃತ್ತಿಜೀವನದ ಮಹತ್ವದ ಚಿತ್ರದ ಫೋಟೋಗಳನ್ನಿಟ್ಟುಕೊಂಡು ಒಂದು ಸಿಡಿಪಿ ಮಾಡಿದ್ದಾರೆ. '12 ಇಯರ್ಸ್ ಆಫ್ ಯಶ್' ಎಂಬ ಈ ಪೋಸ್ಟರ್ನಲ್ಲಿ ಯಶ್ ಅಭಿನಯದ 'ಕೆಜಿಎಫ್', 'ಕೆಜಿಎಫ್ 2', 'ಮಿಸ್ಟರ್ ಆಂಡ್ ಮಿಸಸ್ ರಾಮಾಚಾರಿ', 'ರಾಜಾಹುಲಿ', 'ಗಜಕೇಸರಿ' ಸೇರಿದಂತೆ ಹಲವು ಚಿತ್ರಗಳ ಫೋಟೋಗಳು ಇವೆ. ಅಖಿಲ್ ಎಪ್ಪಲಪಲ್ಲಿ ಎಂಬುವವರು ಡಿಸೈನ್ ಮಾಡಿರುವ ಈ ಪೋಸ್ಟರ್ ಈಗಾಗಲೇ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಸದ್ಯ ಲಾಕ್ಡೌನ್ನಿಂದಾಗಿ, ಕುಟುಂಬದೊಂದಿಗೆ ಹ್ಯಾಪಿಯಾಗಿರುವ ಯಶ್, ಆದಷ್ಟು ಬೇಗ ಚಿತ್ರೀಕರಣಕ್ಕೆ ಮರಳುವುದಕ್ಕೆ ಎದುರು ನೋಡುತ್ತಿದ್ದಾರೆ. ಇಷ್ಟರಲ್ಲಾಗಲೇ, ಯಶ್ ಅಭಿನಯದ 'ಕೆಜಿಎಫ್ 2' ಚಿತ್ರದ ಚಿತ್ರೀಕರಣ ಮುಗಿದು, ಪ್ರಚಾರ ಕಾರ್ಯ ಶುರುವಾಗಬೇಕಿತ್ತು.
ಮೂರ್ನಾಲ್ಕು ತಿಂಗಳುಗಳ ಹಿಂದೆಯೇ 'ಕೆಜಿಎಫ್ 2' ಚಿತ್ರವು ಅಕ್ಟೋಬರ್ 23ಕ್ಕೆ ಬಿಡುಗಡೆಯಾಗುತ್ತದೆ ಎಂದು ಘೋಷಿಸಲಾಗಿತ್ತು. ಆದರೆ, ಚಿತ್ರದ ಚಿತ್ರೀಕರಣ ಇನ್ನೂ ಪೂರ್ತಿಯಾಗಿಲ್ಲ. ಇನ್ನೂ 20 ದಿನಗಳ ಚಿತ್ರೀಕರಣ ಬಾಕಿ ಇದ್ದು, ಕರೊನಾ ಹಾವಳಿ ಸ್ವಲ್ಪ ತಗ್ಗಿದ ನಂತರ ಚಿತ್ರೀಕರಣ ಪ್ರಾರಂಭವಾಗುವ ಸಾಧ್ಯತೆ ಇದೆ.