ಮುಂಬೈ: ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಪ್ರಕರಣದಲ್ಲಿ ಸಿಬಿಐ ಮುಂಬೈ ನ್ಯಾಯಾಲಯದಲ್ಲಿ ಮುಕ್ತಾಯ ವರದಿಯನ್ನು ಸಲ್ಲಿಸಿದೆ. ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ರಿಯಾ ಚಕ್ರವರ್ತಿ(Rhea Chakraborty), ಅವರ ಸಹೋದರ ಶೋವಿಕ್ ಚಕ್ರವರ್ತಿ ಮತ್ತು ಅವರ ಕುಟುಂಬವನ್ನು ಕೇಂದ್ರೀಯ ತನಿಖಾ ದಳ (ಸಿಬಿಐ) ಅಧಿಕೃತವಾಗಿ ಖುಲಾಸೆಗೊಳಿಸಿದೆ.
2020 ಜೂನ್ 14ರಂದು ಸುಶಾಂತ್ ಮುಂಬೈನ ತಮ್ಮ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದರು. ಅವರ ತಂದೆ ನಟಿ ರಿಯಾ ಚಕ್ರವರ್ತಿ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ನೀಡಿದ್ದಾರೆ ಎಂದು ಆರೋಪಿಸಿ ದೂರು ದಾಖಲಿಸಿದ್ದರು. ಸೆಪ್ಟೆಂಬರ್ 2020ರಲ್ಲಿ ರಿಯಾ ಮತ್ತು ಶೋವಿಕ್ ಅವರನ್ನು ಮಾದಕವಸ್ತು ನಿಯಂತ್ರಣ ಬ್ಯೂರೋ (NCB) ದಿವಂಗತ ನಟನ ಸಾವಿಗೆ ಸಂಬಂಧಿಸಿದ ಮಾದಕವಸ್ತು ಸಂಬಂಧಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಿತು.
ಪ್ರಕರಣದಲ್ಲಿ ಸಿಬಿಐನಿಂದ ಕ್ಲೀನ್ ಚಿಟ್ ಪಡೆದ ಬಳಿಕ ಶೋವಿಕ್ ಮೌನಮುರಿದಿದ್ದಾರೆ. ಶೋವಿಕ್ ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ರಿಯಾ ಜತೆಗಿನ ಹಳೆಯ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ಇಬ್ಬರೂ ಶಾಂತಿಯಾಗಿ ತಿರುಗಾಡುತ್ತಿರುವುದನ್ನು ಕಾಣಬಹುದು. ಇಬ್ಬರು ಯಾವುದೇ ಉದ್ವೇಗವಿಲ್ಲದೆ ಒಳ್ಳೆಯ ಸಮಯ ಕಳೆಯುತ್ತಿರುವುದನ್ನು ನೋಡಬಹುದು. ಈ ವಿಡಿಯೋವನ್ನು ಹಂಚಿಕೊಳ್ಳುವಾಗ ಕೈಮುಗಿದ ಎಮೋಜಿ ಜತೆಗೆ ಸತ್ಯಮೇವ ಜಯತೇ ಎಂದು ಶೀರ್ಷಿಕೆಯಲ್ಲೆ ಬರೆದಿದ್ದಾರೆ.
ಕ್ಲೀನ್ ಚಿಟ್ ಪಡೆದ ಸ್ವಲ್ಪ ಸಮಯದ ನಂತರ ರಿಯಾ ಚಕ್ರವರ್ತಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ವೊಂದನ್ನು ಹಂಚಿಕೊಂಡಿದ್ದಾರೆ. ರಿಯಾ ಚಕ್ರವರ್ತಿ ತನ್ನ ಪೋಟೋಗಳ ಜತೆಗೆ ಹಿನ್ನೆಲೆಯಲ್ಲಿ ವಿಶೇಷ ಹಾಡನ್ನು ಸೇರಿಸಿದ್ದಾರೆ. ಈ ಹಾಡಿನಿಂದಾಗಿ ನಾನು ತೃಪ್ತಳಾಗಿದ್ದೇನೆ ಎಂದು ಹೇಳಿದ್ದಾರೆ. ಸುಶಾಂತ್ ಸಿಂಗ್ ರಜಪೂತ್ ಪ್ರಕರಣದಲ್ಲಿ ಕ್ಲೀನ್ ಚಿಟ್ ಪಡೆದಿದ್ದಕ್ಕಾಗಿ ರಿಯಾ ಅವರ ಈ ಪೋಸ್ಟ್‌ಗೆ ಅಭಿಮಾನಿಗಳು ಅಭಿನಂದನೆ ಸಲ್ಲಿಸುತ್ತಿದ್ದಾರೆ.
ಸಿಬಿಐ ವರದಿ ಏನು ಹೇಳಿದೆ?
ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಪ್ರಕರಣದಲ್ಲಿ ಸಿಬಿಐ ಅಂತಿಮ ವರದಿಯಲ್ಲಿ, ನಟನ ಸಾವಿಗೆ ನಿಜವಾದ ಕಾರಣ ಆತ್ಮಹತ್ಯೆ ಎಂದು ಹೇಳಲಾಗಿತ್ತು. ಮೂಲಗಳ ಪ್ರಕಾರ, ಸುಶಾಂತ್ ಅವರನ್ನು ಆತ್ಮಹತ್ಯೆ ಮಾಡಿಕೊಳ್ಳುವಂತೆ ಯಾರಾದರೂ ಒತ್ತಾಯಿಸಿದ್ದಾರೆ ಎಂಬುದಕ್ಕೆ ಯಾವುದೇ ಪುರಾವೆಗಳು ಸಿಬಿಐಗೆ ಸಿಕ್ಕಿಲ್ಲ. ಸುಶಾಂತ್ ಅವರ ಕುಟುಂಬಕ್ಕೆ ಮುಂಬೈ ನ್ಯಾಯಾಲಯದಲ್ಲಿ ಪ್ರತಿಭಟನಾ ಅರ್ಜಿ ಸಲ್ಲಿಸುವ ಅವಕಾಶವಿದೆ. ಸುಶಾಂತ್ ಆತ್ಮಹತ್ಯೆ ಮತ್ತು ಅಪರಾಧ ಪ್ರಕರಣವನ್ನು ಸಿಬಿಐ ಏಮ್ಸ್ ತಜ್ಞರ ಸಹಾಯದಿಂದ ತನಿಖೆ ನಡೆಸಿತ್ತು. AIIMS ವಿಧಿವಿಜ್ಞಾನ ತಂಡವು ಯಾವುದೇ ಅಕ್ರಮವನ್ನು ತಳ್ಳಿಹಾಕಿತ್ತು. (ಏಜೆನ್ಸೀಸ್)