ರಿಯಾ ಚಕ್ರವರ್ತಿ ಪರ ಕಾಂಗ್ರೆಸ್​ ನಾಯಕನ ಬ್ಯಾಟಿಂಗ್​; ಬಂಧನ 'ಹಾಸ್ಯಾಸ್ಪದ'ವಂತೆ

Reha
Published on

ನವದೆಹಲಿ: ಸುಶಾಂತ್ ಸಿಂಗ್ ಸಾವಿನ ಪ್ರಕರಣಕ್ಕೆ ಸಂಬಂಧಪಟ್ಟಂತೆ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯುರೋ (ಎನ್​​ಸಿಬಿ) ಎನ್​​​ಡಿಪಿಸಿ ಕಾಯ್ದೆಯಡಿ ರಿಯಾ ಚಕ್ರವರ್ತಿಯವರನ್ನು ನಿನ್ನೆ ಬಂಧಿಸಿದೆ.

ಆದರೆ ಅವರನ್ನು ಬಂಧಿಸಿದ್ದು ಸರಿಯಲ್ಲ, ಇದೊಂದು ಹಾಸ್ಯಾಸ್ಪದ ಎನ್ನಿಸುವ ಬಂಧನ ಎಂದು ಕಾಂಗ್ರೆಸ್ ನಾಯಕ ಅಧೀರ್​ ರಂಜನ್​ ಚೌಧರಿ ಹೇಳಿದ್ದಾರೆ.

ರಿಯಾ ಅವರ ತಂದೆ ನಿವೃತ್ತ ಸೇನಾ ಅಧಿಕಾರಿ. ಈ ದೇಶಕ್ಕೆ ಸೇವೆ ಸಲ್ಲಿಸಿದವರು. ರಿಯಾ ಓರ್ವ ಬೆಂಗಾಳಿ ಬ್ರಾಹ್ಮಣ ಯುವತಿ. ಆಕೆಯ ತಂದೆಗೂ ಸಂವಿಧಾನದ ಮೂಲ ಸಿದ್ಧಾಂತವಾದ ನ್ಯಾಯವನ್ನು ಪಡೆಯುವ ಎಲ್ಲ ಹಕ್ಕೂ ಇದೆ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲ, ಸುಶಾಂತ್​ ಸಾವಿಗೆ ನ್ಯಾಯ ಬೇಕು ಎಂಬುದನ್ನು ಓರ್ವ 'ಬಿಹಾರಿ'ಗೆ ನ್ಯಾಯ ಸಿಗಬೇಕು ಎಂಬರ್ಥದಲ್ಲಿ ವ್ಯಾಖ್ಯಾನ ಮಾಡಬಾರದು. ನ್ಯಾಯವೆಂಬುದು ಪ್ರತಿಯೊಬ್ಬರಿಗೂ ಸಿಗಬೇಕು ಎಂದಿದ್ದಾರೆ.

ಮಾಧ್ಯಮಗಳು ಈ ಪರಿ ಮೂಗು ತೂರಿಸಿ, ವಿಚಾರಣೆ ಮಾಡುತ್ತಿರುವುದು ನಮ್ಮ ನ್ಯಾಯಾಂಗ ವ್ಯವಸ್ಥೆಗೆ ಅಪಶಕುನವಾಗಿದೆ. ಇದು ಎಳ್ಳಷ್ಟೂ ಒಳ್ಳೆಯ ಬೆಳವಣಿಗೆಯಲ್ಲ ಎಂದಿದ್ದಾರೆ. ಇದನ್ನೂ ಓದಿ: ಮುಂದುವರಿದ ಕರೊನಾ ಅಬ್ಬರ; ಸೋಂಕಿನಿಂದ ಮೃತರಾದ ಸಿಪಿಐ

ಸುಶಾಂತ್ ಸಿಂಗ್​ ರಜಪೂತ್​ ಭಾರತದ ನಟ. ಆದರೆ ಬಿಜೆಪಿ ಅವರನ್ನು ಬಿಹಾರದ ನಟ ಎಂದು ಬಿಂಬಿಸುತ್ತಿದೆ. ಇದೆಲ್ಲ ಚುನಾವಣೆ ದೃಷ್ಟಿಯಿಂದ ಮಾಡಲಾಗುತ್ತಿರುವ ಗಿಮಿಕ್​ ಎಂದು ಆರೋಪಿಸಿದರು. ರಿಯಾ ಚಕ್ರವರ್ತಿಯನ್ನು ಆತ್ಮಹತ್ಯೆಗೆ ಪ್ರಚೋದನೆ, ಕೊಲೆ ಅಥವಾ ಆರ್ಥಿಕ ಅಪರಾಧದ ಕಾಯ್ದೆಯಡಿ ಬಂಧಿಸಿದೆ ಎನ್​ಡಿಪಿಎಸ್​ ಆ್ಯಕ್ಟ್​​ನಡಿ ಅರೆಸ್ಟ್​ ಮಾಡಿದ್ದು ತೀರ ಹಾಸ್ಯಾಸ್ಪದ. ಕೇಂದ್ರ ತನಿಖಾ ದಳಗಳು ಕೆಲವು ರಾಜಕೀಯ ಮುಖಂಡರನ್ನು ಓಲೈಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿವೆ. ಇಂದಿಗೂ ಸುಶಾಂತ್​​ರದ್ದು ಹತ್ಯೆಯೋ, ಆತ್ಮಹತ್ಯೆಯೋ..ಹತ್ಯೆಯಾದರೆ ಅದನ್ನು ಮಾಡಿದವರು ಯಾರು ಎಂಬುದನ್ನು ಪತ್ತೆ ಮಾಡಲು ಅವರಿಗೆ ಸಾಧ್ಯವಾಗಲಿಲ್ಲ ಎಂದು ಆರೋಪಿಸಿದರು.

ಸದ್ಯ ರಿಯಾ ಅವರು ಮುಂಬೈನ ಬೈಕುಲ್ಲಾ ಜೈಲಿಗೆ ಶಿಫ್ಟ್​ ಮಾಡಲಾಗಿದೆ. ಅವರ ಜಾಮೀನು ಅರ್ಜಿಯನ್ನು ಕೋರ್ಟ್​ ತಿರಸ್ಕರಿಸಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net