ಸುಶಾಂತ್ ಅಂತ್ಯಕ್ರಿಯೆಗೆ ರಿಯಾ ಯಾಕೆ ಹೋಗಲಿಲ್ಲ? ಇಲ್ಲಿದೆ ಉತ್ತರ

Rhea-Chakraborty-Final-1
Published on

ಸುಶಾಂತ್ ಸಿಂಗ್ ರಜಪೂತ್ ಸಾವಿನ ನಂತರ ಮೌನವಾಗಿದ್ದ ಗೆಳತಿ ರಿಯಾ ಚಕ್ರವರ್ತಿ ಇದೀಗ, ಒಂದೊಂದೇ ವಿಷಯಗಳ ಬಗ್ಗೆ ಬಾಯಿಬಿಡುತ್ತಿದ್ದಾರೆ. ಪ್ರಮುಖವಾಗಿ ಸುಶಾಂತ್ ಸಾವಿನ ನಂತರದ ಘಟನೆಗಳ ಬಗ್ಗೆ ಅವರು ಒಂದಿಷ್ಟು ವಿಷಯವನ್ನು ಬಹಿರಂಗಗೊಳಿಸಿದ್ದಾರೆ.

ಪ್ರಮುಖವಾಗಿ, ಸುಶಾಂತ್ ಅವರ ಅಂತ್ಯಕ್ರಿಯೆಯಲ್ಲಿ ರಿಯಾ ಭಾಗವಹಿಸಿರಲಿಲ್ಲ. ಆ ಸಂದರ್ಭದಲ್ಲಿ ಸುಶಾಂತ್ ಅವರ ಇತರೆ ಸ್ನೇಹಿತರು ಹಾಜರಿದ್ದರೂ, ರಿಯಾ ಅನುಪಸ್ಥಿತಿ ಹಲವರಿಗೆ ಆಶ್ಚರ್ಯ ತರಿಸಿತ್ತು. ಇಷ್ಟಕ್ಕೂ ರಿಯಾ ಅಂದು ಅಂತ್ಯಕ್ರಿಯೆಯಲ್ಲಿ ಯಾಕೆ ಭಾಗವಹಿಸಿರಲಿಲ್ಲ? ಈ ವಿಷಯದ ಬಗ್ಗೆ ಅವರು ಮಾತನಾಡಿದ್ದಾರೆ.

`ಸುಶಾಂತ್ ಅವರ ಸಾವಿನ ವಿಷಯ ತಿಳಿದಾಗ ಮಧ್ಯಾಹ್ನ ಎರಡು ಗಂಟೆ ಹೊತ್ತಾಗಿತ್ತು. ವಿಷಯ ಕೇಳಿ ನಿಜಕ್ಕೂ ಶಾಕ್ ಆದೆ. ಆ ನಂತರ ಸುಶಾಂತ್ ಅಂತ್ಯಕ್ರಿಯೆಯಲ್ಲಿ ಭಾಗವಹಿಸಬೇಕು ಎಂಬ ಆಸೆ ಇತ್ತು. ಆದರೆ, ಕೆಲವು ಸ್ನೇಹಿತರು ನಾನು ಹೋಗುವುದು ಸರಿಯಲ್ಲ ಎಂದು ಹೇಳಿದರು. ಸುಶಾಂತ್ ಅವರ ಮನೆಯವರಿಗೆ ನಾನು ಹೋಗುವುದು ಇಷ್ಟವಾಗದಿರಬಹುದು ಎಂಬ ಕಾರಣಕ್ಕೆ ನಾನು ಹೋಗುವುದ ಬೇಡ ಎಂದು ಹೇಳಿದ್ದರು. ಮೇಲಾಗಿ, ಅಂತ್ಯಕ್ರಿಯೆಯಲ್ಲಿ ಭಾಗವಹಿಸುವವರ ಪಟ್ಟಿಯಲ್ಲಿ ನನ್ನ ಹೆಸರು ಇರಲಿಲ್ಲವಂತೆ. ಸುಮ್ಮನೆ ಹೋಗಿ, ಅಲ್ಲಿ ಇನ್ನೇನೋ ಆಗಬಾರದು ಎಂಬ ಕಾರಣಕ್ಕೆ, ನಾನು ಹೋಗುವುದನ್ನು ಹಲವರು ವಿರೋಧಿಸಿದರು. ಅದೇ ಕಾರಣಕ್ಕೆ ಸುಶಾಂತ್ ಅಂತ್ಯಕ್ರಿಯೆಯಲ್ಲಿ ತಾನು ಭಾಗವಹಿಸಲಿಲ್ಲ' ಎಂದು ಹೇಳಿಕೊಂಡಿದ್ದಾರೆ ರಿಯಾ.

ಅಂತ್ಯಕ್ರಿಯೆಗೆ ಹೋಗದಿದ್ದರೂ ಶವಾಗಾರಕ್ಕೆ ಹೋಗಿದ್ದರು ರಿಯಾ. ಆ ಸಂದರ್ಭದಲ್ಲಿ ಸುಶಾಂತ್ ಅವರ ಶವ ನೋಡಿ, `ಐ ಆ್ಯಮ್ ಸಾರಿ ಬಾಬು' ಎಂದು ಹೇಳಿದ್ದರು. ಈ ಬಗ್ಗೆಯೂ ಸಾಕಷ್ಟು ಚರ್ಚೆಯಾಗಿತ್ತು. ಈ ಕುರಿತು ಮಾತನಾಡಿರುವ ಅವರು, `ಇಂತಹ ಸಂದರ್ಭದಲ್ಲಿ ಐ ಆ್ಯಮ್ ಸಾರಿ ಅಂತ ಹೇಳದೆ ಇನ್ನೇನು ಹೇಳಲಿ. ನನ್ನ ಒಬ್ಬ ಒಳ್ಳೆಯ ಗೆಳೆಯ ಪ್ರಾಣ ಕಳೆದುಕೊಂಡಿದ್ದಾನೆ. ಅವನ ಸ್ಮರಣಾರ್ಥ ಕಾಲು ಮುಟ್ಟಿ, ಐ ಆ್ಯಮ್ ಸಾರಿ ಎಂದು ಹೇಳಿದೆ. ಅದರಲ್ಲಿ ತಪ್ಪೇನಿದೆ?' ಎಂದು ಅವರು ಪ್ರಶ್ನಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net