ಪದವಿ ಕಾಲೇಜಿಗೆ ಪ್ರವೇಶ ಪಡೆದ ಸನ್ನಿ ಲಿಯೋನ್? ಉಪನ್ಯಾಸಕರು, ವಿದ್ಯಾರ್ಥಿಗಳಲ್ಲಿ ಸಂಚಲನ!

sunny
Published on

ಕೋಲ್ಕತಾ: ಪದವಿ ಕಾಲೇಜಿನ ಪಟ್ಟಿಯಲ್ಲಿ ಖ್ಯಾತ ಬಾಲಿವುಡ್‌ ತಾರೆ ಸನ್ನಿ ಲಿಯೋನ್‌ ಹೆಸರು ಕಾಣಿಸಿಕೊಂಡು ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ದಂಗಾದ ಘಟನೆ ಕೋಲ್ಕತಾದಲ್ಲಿ ನಡೆದಿದೆ.

ಕೋಲ್ಕತಾ ಕಾಲೇಜಿನ ಪದವಿಪೂರ್ವ ತರಗತಿ ಮುಗಿಸಿ ಮೊದಲ ವರ್ಷದ ಬಿಎಗೆ (ಆನರ್ಸ್‌) ಅರ್ಹತೆ ಪಡೆದಿರುವ ವಿದ್ಯಾರ್ಥಿಗಳ ಪಟ್ಟಿಯಲ್ಲಿ ನಂ.1 ಸ್ಥಾನದಲ್ಲಿ ಸನ್ನಿ ಲಿಯೋನ್‌ ಹೆಸರು ಇತ್ತು.

ಕೋಲ್ಕತಾದ ಅಶುತೋಷ್ ಕಾಲೇಜಿನಲ್ಲಿ ಇಂಗ್ಲಿಷ್‌ನಲ್ಲಿ ಬಿಎ (ಆನರ್ಸ್) ಪ್ರವೇಶಕ್ಕಾಗಿ ಕಾಲೇಜು ತನ್ನ ವೆಬ್‌ಸೈಟ್‌ನಲ್ಲಿ ಉಲ್ಲೇಖಿಸಿದ್ದ ಪಟ್ಟಿಯಲ್ಲಿ ಇವರ ಹೆಸರು ಮೊದಲಿಗೆ ಇದ್ದುದನ್ನು ಕಂಡ ವಿದ್ಯಾರ್ಥಿಗಳೂ ದಂಗಾಗಿ ಹೋಗಿದ್ದರು.

ಮಾತ್ರವಲ್ಲದೇ, ಟಾಪರ್‌ ಸ್ಥಾನದಲ್ಲಿದ್ದ ಸನ್ನಿ ಲಿಯೋನ್‌ ಅಪ್ಲಿಕೇಶನ್ ಐಡಿ ಮತ್ತು ರೋಲ್ ಸಂಖ್ಯೆ ಕೂಡ ಅದರಲ್ಲಿತ್ತು. ಜತೆಗೆ, 12 ನೇ ತರಗತಿ ಪರೀಕ್ಷೆಯಲ್ಲಿ ನಾಲ್ಕು ವಿಷಯಗಳಲ್ಲಿ 400 ಅಥವಾ ಪೂರ್ಣ ಅಂಕಗಳನ್ನು ಪಟ್ಟಿಯಲ್ಲಿ ನಮೂದಿಸಲಾಗಿತ್ತು.

ಈ ವಿಷಯ ಕಾಲೇಜಿನ ಆಡಳಿತ ಮಂಡಳಿಗೆ ತಿಳಿಯುತ್ತಲೇ ಆ ಹೆಸರನ್ನು ತೆಗೆದುಹಾಕಲು ಕ್ರಮ ತೆಗೆದುಕೊಳ್ಳಲಾಗಿದೆ. ಈ ಕುರಿತು ಶಿಕ್ಷಣ ಇಲಾಖೆ ಜತೆ ಮಾತನಾಡಿದ್ದೇವೆ. ಯಾರೋ ಕಿಡಿಗೇಡಿಗಳು ಸನ್ನಿ ಲಿಯೋನ‌ ಹೆಸರಿನಲ್ಲಿ ಈ ಕೃತ್ಯ ಎಸಗಿದ್ದಾರೆ ಎಂದಿರುವ ಆಡಳಿತ ಮಂಡಳಿ ಈ ಬಗ್ಗೆ ತನಿಖೆಗೆ ಆದೇಶಿಸಿದೆ.

ಈ ಹಿಂದೆ ಬಿಜೆಪಿಗೆ ಸೇರ್ಪಡೆಯಾದ ಸನ್ನಿ ಡಿಯೋಲ್ ಬದಲಿಗೆ ಲೋಕಸಭಾ ಚುನಾವಣೆಯ 2019 ರ ಸಂದರ್ಭದಲ್ಲಿ 'ಸನ್ನಿ ಲಿಯೋನ್' ಮುನ್ನಡೆ ಸಾಧಿಸುತ್ತಿದೆ ಎಂದು ಸುದ್ದಿ ನಿರೂಪಕರೊಬ್ಬರು ಹೇಳಿದಾಗ ಸನ್ನಿ ಲಿಯೋನ್ ಸೋಷಿಯಲ್ ಮೀಡಿಯಾದಲ್ಲಿ ಸಂಚಲನ ಮೂಡಿಸಿದ್ದು ಇಲ್ಲಿ ಉಲ್ಲೇಖಾರ್ಹ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net