ರಿಯಾಗೆ ಸಿಬಿಐ ಕೇಳಿದ ಆ 10 ಪ್ರಶ್ನೆಗಳೇನು?

Rhea-Chakraborty-Final
Published on

ಸುಶಾಂತ್ ಸಿಂಗ್ ರಜಪೂತ್ ಸಾವಿನ ತನಿಖೆಯನ್ನು ಸೆಂಟ್ರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಶನ್ (ಸಿಬಿಐ) ಈಗಾಗಲೇ ಶುರು ಮಾಡಿದ್ದು, ಕಳೆದ ಕೆಲವು ದಿನಗಳಿಂದ ನಟಿ ಮತ್ತು ಸುಶಾಂತ್ ಗೆಳತಿ ರಿಯಾ ಚಕ್ರವರ್ತಿಯ ವಿಚಾರಣೆ ಮಾಡುತ್ತಿದೆ. ಬರೀ ರಿಯಾ ಮಾತ್ರವಲ್ಲ, ಆಕೆಯ ಸಹೋದರ ಸೌವಿಕ್ ಚಕ್ರವರ್ತಿ ಅವರನ್ನು ಸಹ ಸಿಬಿಐ ಪ್ರಶ್ನೆ ಮಾಡುತ್ತಿದೆ.

ರಿಯಾ, ಸುಶಾಂತ್ ಜತೆಗೆ ಸುಮಾರು ಒಂದು ವರ್ಷ ಕಾಲ ಜತೆಯಾಗಿದ್ದರು. ಸುಶಾಂತ್ ಸಾವಿಗೂ ಒಂದು ವಾರದ ಮುನ್ನ ಅವರ ಮನೆ ಖಾಲಿ ಮಾಡಿಕೊಂಡು ಹೊರಟು ಹೋಗಿದ್ದು ಈಗಾಗಲೇ ಸುದ್ದಿಯಾಗಿದೆ. ಈ ಹಿನ್ನೆಲೆಯಲ್ಲಿ ರಿಯಾ ಅವರಿಗೆ ಸಿಬಿಐ 10 ಪ್ರಮುಖ ಪ್ರಶ್ನೆಗಳನ್ನು ಕೇಳಿ, ಅದಕ್ಕೆ ಉತ್ತರ ಪಡೆಯುವುದಕ್ಕೆ ಪ್ರಯತ್ನ ನಡೆಸಿದೆ ಎಂದು ಹೇಳಲಾಗುತ್ತಿದೆ. ಇಷ್ಟಕ್ಕೂ ಆ 10 ಪ್ರಶ್ನೆಗಳೇನು? ಇಲ್ಲಿದೆ ನೋಡಿ ...

1) ಸುಶಾಂತ್ ಸಾವಿನ ವಿಷಯವನ್‍ನು ರಿಯಾಗೆ ಮೊದಲು ತಿಳಿಸಿದ್ದು ಯಾರು? ಆ ಸಂದರ್ಭದಲ್ಲಿ ರಿಯಾ ಎಲ್ಲಿದ್ದರು?

2) ಸುಶಾಂತ್ ಸಾವಿನ ಸುದ್ದಿ ತಿಳಿದ ನಂತರ, ರಿಯಾ ಏನು ಮಾಡಿದರು? ಸುಶಾಂತ್ ಅವರ ಬಾಂದ್ರಾ ನಿವಾಸಕ್ಕೇನಾದರೂ ಹೋದರಾ? ಇಲ್ಲವಾದರೆ, ಸುಶಾಂತ್ ಅವರ ಅಂತಿಮ ದರ್ಶನ ಪಡೆದಿದ್ದು ಎಲ್ಲಿ?

3) ಜೂನ್ 8ರಂದು ರಿಯಾ, ಸುಶಾಂತ್ ಅವರ ಮನೆ ಬಿಟ್ಟು ಹೋಗಿದ್ದು ಯಾಕೆ?

4) ಆ ದಿನ ಸುಶಾಂತ್ ಮತ್ತು ರಿಯಾ ನಡುವೆ ಏನಾದರೂ ಜಗಳ ಆಗಿತ್ತಾ?

5) ಮನೆಬಿಟ್ಟು ಹೋದ ನಂತರ ಜೂನ್ 09ರಿಂದ 14ರವರೆಗೆ ರಿಯಾ, ಸುಶಾಂತ್ ಜತೆಗೆ ಮಾತನಾಡಿದ್ದರಾ? ಹಾಗಿದ್ದರೆ ಯಾವ ವಿಷಯದ ಬಗ್ಗೆ ಇಬ್ಬರೂ ಮಾತನಾಡಿದ್ದರು?

6) ಈ ಮಧ್ಯೆ, ಸುಶಾಂತ್ ಏನಾದರೂ ರಿಯಾ ಅವರನ್ನು ಸಂಪರ್ಕಿಸಲು ಪ್ರಯತ್ನಿಸಿದ್ದರಾ? ಸುಶಾಂತ್ ಅವರ ಕರೆಗಳನ್ನು ರಿಯಾ ಬ್ಲಾಕ್ ಮಾಡಿದ್ದು ಯಾಕೆ?

7) ಸುಶಾಂತ್ ಅವರ ಕುಟುಂಬ ಸದಸ್ಯರನ್ನೇನಾದರೂ ಸಂಪರ್ಕಿಸಲು ರಿಯಾ ಪ್ರಯತ್ನಿಸಿದ್ದರಾ? ಹಾಗಾದರೆ, ಯಾಕೆ?

8) ಸುಶಾಂತ್ ಸಿಂಗ್ ರಜಪೂತ್ ಯಾವ ಕಾರಣಕ್ಕಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಅವರಿಗೆ ಚಿಕಿತ್ಸೆ ನೀಡುತ್ತಿದ್ದ ವೈದ್ಯರು ಯಾರು ಮತ್ತು ಯಾವ್ಯಾವ ಔಷಧಿಗಳನ್ನು ಸುಶಾಂತ್ ತೆಗೆದುಕೊಳ್ಳುತ್ತಿದ್ದರು?

9) ಸುಶಾಂತ್ ಸಿಂಗ್ ರಜಪೂತ್ ಕುಟುಂಬದ ಜತೆಗೆ ರಿಯಾ ಚಕ್ರವರ್ತಿ ಅವರ ಸಂಬಂಧ ಹೇಗಿತ್ತು?

10) ಸುಶಾಂತ್ ಸಾವಿನ ಬಗ್ಗೆ ಸಿಬಿಐ ತನಿಖೆ ಮಾಡಬೇಕು ಎಂದು ರಿಯಾ ಬಯಸಿದ್ದು ಯಾಕೆ?

ಈ ಅಂಶಗಳನ್ನು ಪ್ರಮುಖವಾಗಿಟ್ಟುಕೊಂಡು ರಿಯಾ ಮತ್ತು ಆಕೆಯ ಸಹೋದರ ಇಬ್ಬರನ್ನೂ ತನಿಖೆ ಮಾಡಲಾಗುತ್ತದೆ. ಇದಲ್ಲದೆ ಸುಶಾಂತ್ ಮನೆಯಲ್ಲಿ ಅಡುಗೆ ಮಾಡುತ್ತಿದ್ದ ನೀರಜ್, ಫ್ಲಾಟ್‍ಮೇಟ್ ಸಿದ್ಧಾರ್ಥ್ ಪಿಠಾಣಿ ಮುಂತಾದವರನ್ನು ಸಹ ತನಿಖೆ ಮಾಡಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net