

ಸುಶಾಂತ್ ಸಿಂಗ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುದ್ದಿಯಲ್ಲಿರುವ ನಟಿ ಕಂಗನಾ ರಣಾವತ್, ಇದೀಗ ಸಿನಿಮಾ ವಿಚಾರವೊಂದನ್ನು ಹಂಚಿಕೊಂಡಿದ್ದಾರೆ. ಶುಕ್ರವಾರ ‘ತೇಜಸ್’ ಚಿತ್ರದ ಪೋಸ್ಟರ್ ಬಿಡುಗಡೆ ಮಾಡಿಕೊಂಡಿರುವ ಕಂಗನಾ, ಭಾರತೀಯ ವಾಯುಸೇನೆಯ ದಿಟ್ಟತನದ ಬಗ್ಗೆ ಈ ಸಿನಿಮಾ ಮಾತನಾಡಲಿದೆಯಂತೆ.
ಸರ್ವೇಶ್ ಮೇವಾರ್ ನಿರ್ದೇಶನದಲ್ಲಿ ಮೂಡಿಬರಲಿರುವ ತೇಜಸ್ ಸಿನಿಮಾ ಸದ್ಯ ಫಸ್ಟ್ ಲುಕ್ ಬಿಡುಗಡೆ ಮಾಡಿಕೊಂಡಿದ್ದು, ಡಿಸೆಂಬರ್ನಲ್ಲಿ ಚಿತ್ರೀಕರಣಕ್ಕೆ ಚಾಲನೆ ನೀಡಲಿದೆಯಂತೆ. ರೋನಿ ಸ್ಕ್ರಿವ್ವಾಲಾ ನಿರ್ಮಾಣದಲ್ಲಿ ಚಿತ್ರ ತಯಾರಾಗಲಿದೆಯಂತೆ.
ಈಗಾಗಲೇ ನಾಯಕಿ ಪ್ರಧಾನ ಸಿನಿಮಾಗಳಲ್ಲಿಯೇ ಹೆಚ್ಚು ಕಾಣಿಸಿಕೊಳ್ಳುತ್ತಿರುವ ಕಂಗನಾ, ಮಣಿಕರ್ಣಿಕಾ, ಪಂಗಾ, ತಲೈವಿ ಸೇರಿ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ. ಇದೀಗ ಆ ಸಾಲಿಗೆ ತೇಜಸ್ ಸಿನಿಮಾ ಸಹ ಸೇರ್ಪಡೆಗೊಳ್ಳುತ್ತಿದ್ದು, ಕಂಗನಾ ಅವರ ಮೊದಲ ಲುಕ್ ಕುತೂಹಲ ಮೂಡಿಸಿದೆ.
ಇದನ್ನೂ ಓದಿ: ಪ್ರಕಾಶ್ ರೈಗೆ ನೆಟ್ಟಿಗರಿಂದ ವಿರೋಧ
ಅಂದಹಾಗೆ, ಈ ಹಿಂದೆ ಉರಿ ದಿ ಸರ್ಜಿಕಲ್ ಸ್ಟ್ರೈಕ್ ಚಿತ್ರದ ಮುಂದುವರಿದ ಭಾಗವಾಗಿ ತೇಜಸ್ ಮೂಡಿಬರಲಿದೆ ಎನ್ನಲಾಗಿತ್ತು. ಈ ವಿಚಾರವನ್ನು ತಳ್ಳಿ ಹಾಕಿದ ಚಿತ್ರತಂಡ, ಉರಿ ಚಿತ್ರವೇ ಬೇರೆ, ತೇಜಸ್ ಕಥೆಯೇ ಬೇರೆ ಎಂದಿದೆ. (ಏಜೆನ್ಸೀಸ್)