

ಬೆಂಗಳೂರು: ಕಳೆದ ಕೆಲವು ದಿನಗಳಿಂದ ಹಿಂದಿ ಚಲನಚಿತ್ರರಂಗವನ್ನು ಕೆಣಕುತ್ತಲೇ ಬಂದಿರುವ ಖ್ಯಾತ ನಿರ್ದೇಶಕ ರಾಮ್ಗೋಪಾಲ್ ವರ್ಮಾ ಇದೀಗ ಬಾಲಿವುಡ್ ಸ್ಟಾರ್ಗಳಿಗೆಲ್ಲ ಒಂದು ಸವಾಲೆಸೆದಿದ್ದಾರೆ. ಅಲ್ಲದೆ ಇಡೀ ಭಾರತದ ಚಿತ್ರರಂಗಕ್ಕೆ ಒಂದು ಪ್ರಸ್ತಾವನೆ ಮುಂದಿಟ್ಟಿದ್ದಾರೆ.
ರಣವೀರ್ ಸಿಂಗ್, ರಣಬೀರ್ ಕಪೂರ್, ಅಜಯ್ ದೇವಗನ್, ಅಕ್ಷಯ್ ಕುಮಾರ್, ಜಾನ್ ಅಬ್ರಹಾಂ ಮುಂತಾದವರು ತಮ್ಮ ಹಿಂದಿ ಸಿನಿಮಾಗಳನ್ನು ತೆಲುಗು, ಕನ್ನಡ ಮುಂತಾದ ಭಾಷೆಗಳಿಗೂ ಡಬ್ಮಾಡಿ ಅವರ ಹಿಂದಿ ಸಿನಿಮಾಗಳು ಜಾಸ್ತಿ ಗಳಿಕೆ ಕಾಣುವಂತೆ ಮಾಡಲಿ, ಇದನ್ನು ಅವರು ಸವಾಲಾಗಿ ಸ್ವೀಕರಿಸಲಿ ಎಂದು ವರ್ಮಾ ಹೇಳಿದ್ದಾರೆ.
ದಕ್ಷಿಣ ಭಾರತದ ಯಶ್, ಪ್ರಭಾಸ್, ರಾಮ್ಚರಣ್ ತೇಜ, ಜೂ.ಎನ್ಟಿಆರ್ ಅವರ ಸಿನಿಮಾಗಳು ಹಿಂದಿಗೂ ಡಬ್ ಆಗಿ ಯಶಸ್ಸು ಗಳಿಸುತ್ತಿರುವುದು ಹಿಂದಿಯ ಸ್ಟಾರ್ಗಳಾದ ಅಕ್ಷಯ್ಕುಮಾರ್, ಅಜಯ್ ದೇವಗನ್, ರಣವೀರ್ಸಿಂಗ್, ರಣಬೀರ್ ಕಪೂರ್, ಜಾನ್ ಅಬ್ರಹಾಂ ಮುಂತಾದವರಿಗೆ ಇರಿಸುಮುರಿಸು ಮೂಡಿಸಿದೆ ಎಂದು ವರ್ಮಾ ಅಭಿಪ್ರಾಯ ಪಟ್ಟಿದ್ದಾರೆ.
ಅಷ್ಟೇ ಅಲ್ಲದೆ, ಭಾಷಾ ಕದನ ನಡೆಸುವ ಬದಲು ಭಾರತದ ಎಲ್ಲ ಸ್ಟಾರ್ಗಳು ಹಾಗೂ ನಿರ್ದೇಶಕರು ಎಲ್ಲ ಭಾಷೆಗಳಲ್ಲೂ ತಮ್ಮ ಸಿನಿಮಾಗಳನ್ನು ಮಾಡುವಂಥ ಒಂದು ಆರೋಗ್ಯಕರ ಸ್ಪರ್ಧೆ ಉಂಟಾಗಲಿ. ಆ ಮೂಲಕ ಪ್ರೇಕ್ಷಕರು ಎಲ್ಲ ಕಡೆಯಿಂದ ಎಲ್ಲವನ್ನೂ ಸವಿಯುವಂತಾಗಲಿ. ಬಳಿಕ ಭಾರತದ ನಾಗರಿಕರೇ ಯಾರು ಬೆಸ್ಟ್ ಅಂತ ನಿರ್ಣಯಿಸಲಿ ಎಂಬುದಾಗಿ ರಾಮ್ಗೋಪಾಲ್ ವರ್ಮಾ ಹೇಳಿದ್ದಾರೆ.
ಸದ್ಯ ಕನ್ನಡ ಹಾಗೂ ತೆಲುಗಿನ ಡಬ್ ಸಿನಿಮಾಗಳು ಒರಿಜಿನಲ್ ಹಿಂದಿ ಸಿನಿಮಾಗಳಿಗಿಂತಲೂ ಹೆಚ್ಚಿನ ಗಳಿಕೆ ಕಾಣುತ್ತಿರುವುದು ಹಿಂದಿಯ ಪ್ರೇಕ್ಷಕರು ಕಂಟೆಂಟ್ಗೆ ಗಮನ ಕೊಡುತ್ತಿದ್ದಾರೆ ವಿನಃ ಅದು ಎಲ್ಲಿಂದ ಬಂದಿದೆ ಎಂಬುದರ ಕುರಿತು ತಲೆಕೆಡಿಸಿಕೊಳ್ಳುತ್ತಿಲ್ಲ ಎಂಬುದು ಸಾಬೀತಾಗಿದೆ. ಈ ಹಿಂದೆ ಮೈನೆ ಪ್ಯಾರ್ ಕಿಯಾ, ಹಮ್ ಆಪ್ ಕೆ ಕೌನ್ ಮತ್ತು ದಂಗಲ್ ಚಿತ್ರಗಳು ಪ್ರಾದೇಶಿಕ ಭಾಷೆಗಳಿಗೆ ಡಬ್ ಆಗಿ ಕ್ಲಿಕ್ ಆಗಿದ್ದರೂ ಗಳಿಕೆಯ ವಿಚಾರದಲ್ಲಿ ಅವು ಯಶಸ್ವಿ ಪ್ರಾದೇಶಿಕ ಭಾಷೆಗಳ ಮಟ್ಟಕ್ಕೆ ಬಂದಿರಲಿಲ್ಲ ಎಂದೂ ಆರ್ಜಿವಿ ಅಭಿಪ್ರಾಯಪಟ್ಟಿದ್ದಾರೆ.