ಬಾಲಿವುಡ್​ ಮೇಲೆ ಅಣುಬಾಂಬ್​!; ನಿರ್ದೇಶಕ ರಾಮ್​ಗೋಪಾಲ್​ ವರ್ಮಾ ಹೀಗಂದಿದ್ದೇಕೆ?

RGV Yash
Published on

ಬೆಂಗಳೂರು: ಬಹುನಿರೀಕ್ಷಿತ ಹಾಗೂ ಅದ್ಧೂರಿ ನಿರ್ಮಾಣದ ಮತ್ತು ಬಹುತಾರಾಗಣದ ಸಿನಿಮಾ ಕೆಜಿಎಫ್​2 ಜಗತ್ತಿನಾದ್ಯಂತ ತೆರೆಗಳ ಮೇಲೆ ಅಬ್ಬರಿಸುತ್ತಿರುವ ನಡುವೆಯೇ ಭಾರಿ ಗಳಿಕೆಯನ್ನು ಸಾಧಿಸುತ್ತಿರುವುದಷ್ಟೇ ಅಲ್ಲದೆ, ಮೆಚ್ಚುಗೆಯನ್ನೂ ಪಡೆಯುತ್ತಿದೆ.

ಕನ್ನಡ ಮಾತ್ರವಲ್ಲದೆ ಇತರ ಭಾಷೆಗಳ ಖ್ಯಾತನಾಮರೂ ಕೆಜಿಎಫ್​2 ಬಗ್ಗೆ ಮಾತನಾಡುತ್ತಿದ್ದು, ಖ್ಯಾತ ನಿರ್ದೇಶಕ ರಾಮ್​ಗೋಪಾಲ್ ವರ್ಮಾ ಕೂಡ ಈ ಸಿನಿಮಾ ಕುರಿತು ತಮ್ಮ ಅನಿಸಿಕೆಯನ್ನು ಹಂಚಿಕೊಂಡಿದ್ದಾರೆ.

ಕೆಜಿಎಫ್​2 ನ ಮೇಕಿಂಗ್ ಕುರಿತು ಮಾತನಾಡಿರುವ ಆರ್​ಜಿವಿ, ಸ್ಟಾರ್​ಗಳ ಸಂಭಾವನೆ ಬದಲು ಚಿತ್ರದ ಮೇಕಿಂಗ್ ಮೇಲೆ ಹಣ ಹೂಡಿದರೆ ಖಂಡಿತ ಒಳ್ಳೆಯ ಗುಣಮಟ್ಟದ ಜತೆಗೆ ದೊಡ್ಡ ಯಶಸ್ಸು ಸಾಧ್ಯ ಎಂಬುದನ್ನು ಕೆಜಿಎಫ್​2ನ ರಾಕ್ಷಸ ಯಶಸ್ಸು ಸಾಬೀತುಪಡಿಸಿದೆ ಎಂದಿದ್ದಾರೆ.

ಹಿಂದಿ ಚಿತ್ರರಂಗವನ್ನು ಮರೆತು ಬಿಡಿ, ತೆಲುಗು-ತಮಿಳು ಚಿತ್ರರಂಗದವರೂ ಇದುವರೆಗೆ ಕನ್ನಡ ಚಿತ್ರರಂಗವನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ. ಆದರೆ ಈಗ ಕೆಜಿಎಫ್​ ಮೂಲಕ ನಿರ್ದೇಶಕ ಪ್ರಶಾಂತ್ ನೀಲ್​ ಅದನ್ನು ಜಗತ್ತಿನ ನಕ್ಷೆ ಮೇಲಿಟ್ಟಿದ್ದಾರೆ ಎಂದಿದ್ದಾರೆ ಆರ್​ಜಿವಿ.

ವಿಲನ್​ಗಳ ಮೇಲೆ ಮಷಿನ್​ ಗನ್​ನಿಂದ ಗುಂಡುಗಳ ಸುರಿಮಳೆ ಸುರಿಯಲು ಹೇಗೆ ರಾಕಿಭಾಯ್​ ಮುಂಬೈಗೆ ಬರುತ್ತಾನೋ ಹಾಗೆ ಯಶ್​ ಬಾಲಿವುಡ್​ನ ಎಲ್ಲ ಸ್ಟಾರ್​ಗಳ ಓಪನಿಂಗ್ ಕಲೆಕ್ಷನ್​ ಮೇಲೆ ಮಷಿನ್ ಗನ್​ ಇಟ್ಟಿದ್ದಾರೆ ಎಂದು ಅಭಿಪ್ರಾಯ ಪಟ್ಟಿರುವ ರಾಮ್​ಗೋಪಾಲ್ ವರ್ಮಾ, ಕೆಜಿಎಫ್​ನ ಅಂತಿಮ ಗಳಿಕೆ ಸ್ಯಾಂಡಲ್​ವುಡ್​ನಿಂದ ಬಾಲಿವುಡ್​ಗೆ ಎಸೆದ ಅಣುಬಾಂಬ್ ಆಗಿರಲಿದೆ ಎಂದೂ ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net