

ಬೆಂಗಳೂರು: ನಿನ್ನೆ ಮಧ್ಯರಾತ್ರಿಯಿಂದಲೇ ಜಗತ್ತಿನಾದ್ಯಂತ ತೆರೆ ಮೇಲೆ ಅಬ್ಬರಿಸುತ್ತಿರುವ ಬಹುನಿರೀಕ್ಷಿತ ಅದ್ಧೂರಿ ನಿರ್ಮಾಣದ ಹಾಗೂ ಬಹುತಾರಾಗಣ ಸಿನಿಮಾ ಕೆಜಿಎಫ್-ಚಾಪ್ಟರ್ 2 ಮೊದಲ ದಿನ ಎಷ್ಟು ಗಳಿಕೆ ಕಂಡಿರಬಹುದು ಎಂಬ ಕುತೂಹಲಕ್ಕೆ ತೆರೆ ಬಿದ್ದಿದೆ.
ಏಕೆಂದರೆ, ಮೊದಲ ದಿನವೇ ಚಿತ್ರದ ಗಳಿಕೆ ನೂರು ಕೋಟಿ ರೂಪಾಯಿ ದಾಟಿತ್ತು ಎಂದು ಹೇಳಲಾಗಿದ್ದರೂ, ನಿಖರವಾಗಿ ಆಗಿರುವ ಗಳಿಕೆ ಎಷ್ಟು ಎಂಬ ಬಗ್ಗೆ ಕುತೂಹಲವಂತೂ ಹಾಗೇ ಉಳಿದಿತ್ತು. ಆದರೆ ಇದೀಗ ನಿರ್ಮಾಣ ಸಂಸ್ಥೆಯೇ ಅಧಿಕೃತವಾಗಿ ತಿಳಿಸಿರುವುದರಿಂದ ಆ ಕುತೂಹಲ ತಣಿದಿದೆ.
ನಿರ್ಮಾಣ ಸಂಸ್ಥೆಯಾದ ಹೊಂಬಾಳೆ ಫಿಲ್ಸ್ಮ್ ಕೆಜಿಎಫ್-ಚಾಪ್ಟರ್ 2ನ ಭಾರತದಾದ್ಯಂತದ ಮೊದಲ ದಿನದ ಗಳಿಕೆ 134.5 ಕೋಟಿ ರೂಪಾಯಿ ಎಂದು ತಿಳಿಸಿದೆ. ಕನ್ನಡ, ಹಿಂದಿ, ತೆಲುಗು, ತಮಿಳು, ಮಲಯಾಳಂ.. ಹೀಗೆ ಐದು ಭಾಷೆಗಳಲ್ಲಿ ತೆರೆ ಕಂಡಿರುವ ಈ ಚಿತ್ರದ ಮೊದಲ ದಿನದ ಗಳಿಕೆ 134.5 ಕೋಟಿ ರೂ. ಆಗಿದೆ. ಇನ್ನು ಜಗತ್ತಿನಾದ್ಯಂತದ ಗಳಿಕೆ ಸುಮಾರು 150 ಕೋಟಿ ರೂ. ಎನ್ನಲಾಗುತ್ತಿದೆ.