More

    ರಕ್ತದಿಂದ ಬರೆದಿರುವ ಕಥೆ ಇದು…

    |ಚೇತನ್ ನಾಡಿಗೇರ್ ಬೆಂಗಳೂರು

    ‘ರಕ್ತದಿಂದ ಬರೆದಿರುವ ಕಥೆ ಇದು. ಶಾಯಿಯಿಂದ ಮುಂದುವರಿಸೋಕೆ ಸಾಧ್ಯವಿಲ್ಲ, ರಕ್ತದಲ್ಲೇ ಮುಂದುವರಿಸಬೇಕು …’ ಹಾಗಂತ ‘ಕೆಜಿಎಫ್ 2’ ಚಿತ್ರದಲ್ಲೊಂದು ಸಂಭಾಷಣೆ ಇದೆ. ಇದಕ್ಕೆ ಪೂರಕವಾಗಿ ಚಿತ್ರ ಸಾಗುತ್ತದೆ. ‘ಕೆಜಿಎಫ್’ನ ಮೊದಲ ಅಧ್ಯಾಯ ರಕ್ತದಿಂದ ಮುಕ್ತಾಯವಾಗಿತ್ತು. ಎರಡನೆಯ ಭಾಗವೂ ರಕ್ತದಿಂದಲೇ ಮುಂದುವರೆದಿದ್ದು, ರಕ್ತದಲ್ಲೇ ಮುಗಿಯುತ್ತದೆ.

    ಗರುಡನನ್ನು ಸಾಯಿಸಿ ಕೆಜಿಎಫ್​ನಲ್ಲಿ ತನ್ನ ಸಾಮ್ರಾಜ್ಯವನ್ನು ರಾಕಿ ಸ್ಥಾಪಿಸುವ ಮೂಲಕ ‘ಕೆಜಿಎಫ್ 2’ ಪ್ರಾರಂಭವಾಗುತ್ತದೆ. ಗರುಡ ಸತ್ತಿರಬಹುದು. ಹಾಗಂತ ಎಲ್ಲವೂ ಮುಗಿಯಿತು ಎಂದರ್ಥವಲ್ಲ. ಮೊದಲ ಭಾಗದಲ್ಲಿ ಬದುಕುಳಿದ ದುಷ್ಟಕೂಟದ ಜತೆಗೆ ಈ ಭಾಗದಲ್ಲಿ ಅಧೀರ ಎಂಬ ಇನ್ನೊಬ್ಬ ಹೊಸ ವಿಲನ್ ಸೇರ್ಪಡೆಯಾಗಿ, ರಾಕಿಯಿಂದ ಕೆಜಿಎಫ್ ಕಿತ್ತುಕೊಳ್ಳುವುದಕ್ಕೆ ಪ್ರಯತ್ನಿಸುತ್ತಾನೆ. ರಾಕಿಯ ವೇಗಕ್ಕೆ ಕಡಿವಾಣ ಹಾಕುವುದಕ್ಕೆ ಪ್ರಧಾನ ಮಂತ್ರಿ ರಮಿಕಾ ಸೇನ್ ನಿಲ್ಲುತ್ತಾರೆ. ಆತನ ಅಕ್ರಮಕ್ಕೆ ತಡೆಯೊಡ್ಡುವುದಕ್ಕೆ ಸಿಬಿಐ ಯುದ್ಧ ಸಾರುತ್ತದೆ. ಇವರೆಲ್ಲರಿಂದ ರಾಕಿ, ಕೆಜಿಎಫ್ ಉಳಿಸಿಕೊಳ್ಳಲು ಯಶಸ್ವಿಯಾಗುತ್ತಾನಾ ಎಂಬುದು ಚಿತ್ರದ ಕಥೆ.

    ಮೊದಲ ಭಾಗಕ್ಕೆ ಹೋಲಿಸಿದರೆ, ಎರಡನೆಯ ಭಾಗವು ಎಲ್ಲ ವಿಷಯದಲ್ಲೂ ದೊಡ್ಡದಾಗಿದೆ. ಬಿಲ್ಡಪ್ ಇರಬಹುದು, ಮಾಸ್ ಅಂಶಗಳಿರಬಹುದು, ಹಿಂಸೆ, ಕ್ರೌರ್ಯ, ಕ್ರೖೆಮ್ ರಕ್ತಪಾತ ಎಲ್ಲವೂ ಇಲ್ಲಿ ದುಪ್ಪಟ್ಟಾಗಿದೆ. ಇಲ್ಲಿ ಅದೆಷ್ಟು ಹೆಣಗಳು ಬೀಳುತ್ತವೋ, ಅದೆಷ್ಟು ಬುಲೆಟ್​ಗಳು ಹಾರುತ್ತವೋ ಹೇಳುವುದು ಕಷ್ಟ. ಒಮ್ಮೊಮ್ಮೆಯಂತೂ ಪ್ರೇಕ್ಷಕರಿಗೂ ಎಲ್ಲಿ ಬಡಿಯುತ್ತದೋ ಎಂದು ಭಯವಾಗುವಷ್ಟು ಬುಲೆಟ್​ಗಳು ಹಾರುತ್ತವೆ. ಹಿಂಸೆ, ರಕ್ತಪಾತ ಮತ್ತು ಬುಲೆಟ್​ಗಳ ಭೋರ್ಗರೆತ ಅದೆಷ್ಟು ತೀವ್ರವಾಗಿದೆ ಎಂದರೆ, ಚಿತ್ರಮಂದಿರದಿಂದ ಹೊರಬಂದರೂ, ಚಿತ್ರದ ಗುಂಗಿನಿಂದ ಹೊರಬರುವುದು ಕಷ್ಟವಾಗುತ್ತದೆ. ನಾಯಕನ ಪಾತ್ರವನ್ನು ವಿಜೃಂಭಿಸುವುದಕ್ಕೆ ಎಷ್ಟು ಸಾಧ್ಯವೋ, ಅವೆಲ್ಲವನ್ನೂ ಮಾಡುತ್ತಾರೆ ನಿರ್ದೇಶಕ ಪ್ರಶಾಂತ್ ನೀಲ್. ಕೆಲವೊಮ್ಮೆ ಅದು ಅತಿ ಎನಿಸುವುದೂ ಉಂಟು. ಆದರೆ, ಇಂತಹ ಚಿತ್ರಗಳಲ್ಲಿ ಲಾಜಿಕ್ ಹುಡುಕುವಂತಿಲ್ಲ, ಮ್ಯಾಜಿಕ್ ಅಷ್ಟೇ ಮುಖ್ಯವಾಗುತ್ತದೆ ಎಂಬುದನ್ನು ಮರೆಯಬಾರದು. ಒಟ್ಟಾರೆ ಮಾಸ್ ಪ್ರೇಕ್ಷಕರನ್ನು ಹಿಡಿದಿಡುವುದಕ್ಕೆ ಏನೆಲ್ಲ ಬೇಕೋ ಅವೆಲ್ಲವನ್ನೂ ಪ್ರಶಾಂತ್ ಮಾಡಿದ್ದಾರೆ.

    ಹಾಗೆ ನೋಡಿದರೆ, ಈ ಬಾರಿ ಪ್ರಶಾಂತ್ ಬಳಿ ವಿಶಿಷ್ಟ ಕಥೆ ಏನಿಲ್ಲ. ಮೊದಲ ಭಾಗದಲ್ಲಿ ತಾಯಿ-ಮಗನ ಸೆಂಟಿಮೆಂಟ್ ಇತ್ತು. ಜೀತದಾಳುಗಳ ಯಾತನಾಮಯ ಕಥೆ ಇತ್ತು. ನಾಯಕ ಹೇಗೆ ಅನಾಥರಕ್ಷಕನಾಗಿ ಅವರನ್ನೆಲ್ಲ ದುಷ್ಟರಿಂದ ಕಾಪಾಡುತ್ತಾನೆ ಎಂದು ತೋರಿಸಲಾಗಿತ್ತು. ‘ಕೆಜಿಎಫ್’ ಗೆಲುವಿನಲ್ಲಿ ಇವೆಲ್ಲವೂ ಪ್ರಮುಖ ಪಾತ್ರ ವಹಿಸಿತ್ತು. ಇದೆಲ್ಲದರಿಂದ ಹೊರತಾಗಿರುವ ‘ಕೆಜಿಎಫ್ 2’ನ ನಿಜವಾದ ಹೈಲೈಟ್ ಎಂದರೆ ಆಕ್ಷನ್ ದೃಶ್ಯಗಳು. ರಾಕಿ ಮತ್ತು ಅಧೀರನ ಮುಖಾಮುಖಿ ಇರಬಹುದು, ಒಂದು ಚಿನ್ನದ ಬಿಸ್ಕೆಟ್​ಗಾಗಿ ಪೊಲೀಸ್ ಸ್ಟೇಶನ್ ಉಡಾಯಿಸುವ ದೃಶ್ಯಗಳಿರಬಹುದು, ನಾಯಕಿಯನ್ನು ಕಿಡ್ನಾಪ್ ಮಾಡಿದವರನ್ನು ಚೇಸ್ ಮಾಡುವ ದೃಶ್ಯಗಳಿರಬಹುದು … ಎಲ್ಲವೂ ಬೇರೆ ಲೆವೆಲ್​ನಲ್ಲಿದೆ. ಇದೆಲ್ಲದರಿಂದ ಮೊದಲಾರ್ಧ ಸಾಗುವುದೇ ಗೊತ್ತಾಗುವುದಿಲ್ಲ. ಆ ವೇಗ ಮತ್ತು ಓಟಕ್ಕೆ ಬ್ರೇಕ್ ಬೀಳುವುದು ದ್ವಿತೀಯಾರ್ಧದಲ್ಲಿ. ಇಲ್ಲಿ ಚಿತ್ರ ಸ್ವಲ್ಪ ನಿಧಾನವಾಗುತ್ತದೆ. ಅಧೀರನ ಆಗಮನದಿಂದ ಪುನಃ ಚಿತ್ರಕ್ಕೆ ವೇಗ ಸಿಗುತ್ತದೆ.

    ‘ಕೆಜಿಎಫ್ 2’ ನಿಂತಿರುವುದು ಯಶ್ ಮೇಲೆ. ಅವರ ಮ್ಯಾನರರಿಸಂ, ಮಾತುಗಳು, ಅಭಿನಯ ಎಲ್ಲವೂ ಅಭಿಮಾನಿಗಳಿಗೆ ಖುಷಿ ಕೊಡುತ್ತದೆ. ಸಂಜಯ್ ದತ್ ಮೇಕಪ್ ಮತ್ತು ಕಾಸ್ಟ್ಯೂಮ್ೆ ಕೊಟ್ಟಿರುವ ಮಹತ್ವವನ್ನು ಅವರ ಪಾತ್ರ ಮತ್ತು ಮ್ಯಾನರಿಸಂಗೂ ಕೊಟ್ಟಿದ್ದರೆ ಚೆನ್ನಾಗಿರುತ್ತಿತ್ತು. ರವೀನಾ ಟಂಡನ್, ಪ್ರಕಾಶ್ ರೈ, ರಾವ್ ರಮೇಶ್ ತಮ್ಮ ಪಾತ್ರಗಳಿಗೆ ನ್ಯಾಯ ಸಲ್ಲಿಸಿದ್ದಾರೆ. ಶ್ರೀನಿಧಿ ಶೆಟ್ಟಿಗೆ ಇಲ್ಲಿ ದೊಡ್ಡ ಪಾತ್ರವಿದೆ. ಸಂಭಾಷಣೆಗಳು, ಭುವನ್ ಗೌಡ ಛಾಯಾಗ್ರಹಣ, ರವಿ ಬಸ್ರೂರು ಹಿನ್ನೆಲೆ ಸಂಗೀತ ಚಿತ್ರವನ್ನು ಇನ್ನಷ್ಟು ಶ್ರೀಮಂತಗೊಳಿಸಿದೆ.

    ನಾವು ರಾಜೀನಾಮೆ ಕೇಳಿಲ್ಲ, ಆದ್ರೆ ಈಶ್ವರಪ್ಪ ಬಂಧನ ಆಗ್ಬೇಕು; ಸಂತೋಷ್ ಸಹೋದರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts