

ಬೆಂಗಳೂರು: ಮೊನ್ನೆಮೊನ್ನೆಯಷ್ಟೇ ರಿಯಲ್ ಸ್ಟಾರ್ ಉಪೇಂದ್ರ ತಮ್ಮ ನಿರ್ದೇಶನದ ಹೊಸ ಸಿನಿಮಾದ ಟೈಟಲ್ ಬಿಡುಗಡೆ ಮಾಡಿ ಅಭಿಮಾನಿಗಳು ಹಾಗೂ ಸಿನಿಪ್ರಿಯರ ತಲೆಗೆ ಹುಳ ಬಿಟ್ಟಿದ್ದರು. ಇದೀಗ ಅವರದೇ ಸಿನಿಮಾದ ಮತ್ತೊಂದು ಟೈಟಲ್ ಬಿಡುಗಡೆ ಆಗಿದ್ದು, ಈ ಸಲ ರಾಮ್ಗೋಪಾಲ್ ವರ್ಮಾ ಜತೆಗೂಡಿ ಉಪ್ಪಿ ಮತ್ತೊಮ್ಮೆ ಚಿತ್ರಾಭಿಮಾನಿಗಳು ಟೈಟಲ್ ಬಗ್ಗೆ ತಲೆಕೆಡಿಸಿಕೊಳ್ಳುವಂತೆ ಮಾಡಿದ್ದಾರೆ.
ಉಪೇಂದ್ರ ನಿರ್ದೇಶನದ ಹೊಸ ಸಿನಿಮಾದ ಟೈಟಲ್ ಇಂಗ್ಲಿಷ್ನ 'ಯು-ಐ' ಥರ ಇದೆಯಾದರೂ ಹೀಗೇ ಎಂದು ಹೇಳುವಂತಿಲ್ಲ. ಮಾತ್ರವಲ್ಲ ಅದರ ವಿನ್ಯಾಸ ನಾನಾ ರೀತಿಯಲ್ಲಿ ವಿಶ್ಲೇಷಣೆ ಮಾಡುವಂತಿದೆ. ಈ ಹಿಂದೆ A ಸಿನಿಮಾ ಮೂಲಕ ರಂಜಿಸಿದ್ದ ಉಪ್ಪಿಯ ಸಿನಿಮಾ ಟೈಟಲ್ನಲ್ಲಿ ಈಗ ಮತ್ತೊಮ್ಮೆ ಇಂಗ್ಲಿಷ್ ವರ್ಣಮಾಲೆಯ ಅಕ್ಷರವೊಂದು ಕಣ್ಮುಂದೆ ಬಂದಿದೆ.
ಹೌದು.. ಉಪೇಂದ್ರ ನಾಯಕರಾಗಿರುವ ಸಿನಿಮಾಗೆ ರಾಮ್ಗೋಪಾಲ್ ವರ್ಮಾ ನಿರ್ದೇಶನ ಮಾಡಲಿರುವುದು ಈಗಾಗಲೇ ಗೊತ್ತಿದ್ದ ವಿಚಾರವಾದರೂ ಅದರ ಟೈಟಲ್ ಬಹಿರಂಗಗೊಂಡಿರಲಿಲ್ಲ. ಉಪೇಂದ್ರ ಅಭಿನಯದಲ್ಲಿ ತಮ್ಮ ನಿರ್ದೇಶನದ ಮುಂದಿನ ಸಿನಿಮಾ ಟೈಟಲ್ R ಎಂದು ಸ್ವತಃ ರಾಮ್ಗೋಪಾಲ್ ವರ್ಮಾ ಘೋಷಿಸಿದ್ದಾರೆ. ಭಾರತದ ಅಪರಾಧ ಲೋಕದಲ್ಲಿ ವಿಶಿಷ್ಟ ಎನಿಸುವಂಥ ಗ್ಯಾಂಗ್ಸ್ಟರ್ ಒಬ್ಬರ ಜೀವನಾಧರಿತ ಕಥಾಹಂದರದ ಮೇಲೆ R ಎಂಬ ಸಿನಿಮಾ ನಿರ್ದೇಶಿಸಲಿದ್ದು, ಅದರಲ್ಲಿ R ಪಾತ್ರವನ್ನು ಉಪೇಂದ್ರ ಮಾಡಲಿದ್ದಾರೆ ಎಂದು ರಾಮ್ಗೋಪಾಲ್ ವರ್ಮಾ ಘೋಷಣೆ ಮಾಡಿದ್ದಾರೆ.
ಈ R ಸಾಮಾನ್ಯ ಗ್ಯಾಂಗ್ಸ್ಟರ್ ಅಲ್ಲ. ಈತ ಬೆಂಗಳೂರು ಮಾತ್ರವಲ್ಲದೆ ಮುಂಬೈ, ದುಬೈಯಲ್ಲೂ ಹವಾ ಸೃಷ್ಟಿಸಿದ್ದ. ದುಬೈನಲ್ಲಿ ದಾವೂದ್ ಇಬ್ರಾಹಿಮ್ಗೂ ಈ R ಹಲವು ಬಾರಿ ಸಹಾಯ ಮಾಡಿದ್ದ. ಅಷ್ಟೇ ಏಕೆ ಪೊಲೀಸರು ಕೂಡ ಕೆಲವೊಮ್ಮೆ R ಸಹಾಯ ಪಡೆದಿದ್ದರು. ಮಾತ್ರವಲ್ಲ, ಈ Rಗೆ ಕೆಲವೊಮ್ಮೆ ಪೊಲೀಸರೂ ಹೆದರುತ್ತಿದ್ದರು. ಈ R ಜಗತ್ತಿನಲ್ಲಿ ಯಾರಿಗೂ ಹೆದರದ ಹಾಗೂ ಭಾರತದ ಅತ್ಯಂತ ಯಶಸ್ವಿ ಗ್ಯಾಂಗ್ಸ್ಟರ್ ಎಂದೆಲ್ಲ ಹಲವು ವಿವರಗಳನ್ನು ಹೇಳಿರುವ ರಾಮ್ಗೋಪಾಲ್ ವರ್ಮಾ, R ಯಾರು ಎಂಬುದನ್ನು ಪೂರ್ತಿಯಾಗಿ ಹೇಳಿಲ್ಲ. ಹೀಗಾಗಿ ಅಭಿಮಾನಿಗಳು R ಯಾರು ಎಂದು ಯೋಚಿಸುವಂತೆ ಮಾಡಿದೆ ಉಪ್ಪಿಯ ಮುಂದಿನ ಸಿನಿಮಾ. ಈ ಚಿತ್ರವು ಎ ಸ್ಕ್ವೇರ್ ಪ್ರೊಡಕ್ಷನ್ಸ್ ಸಂಸ್ಥೆಯ ನಿರ್ಮಾಣದಲ್ಲಿ ಮೂಡಿ ಬರಲಿದೆ.